ಬೆಟಗೇರಿಯಲ್ಲಿ ವಿಭಿನ್ನ ವೈಭವದ ದೀಪಾವಳಿ ಹಬ್ಬ ಆಚರಣೆ
ಬೆಟಗೇರಿ 07 : ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮನೆ-ಮನೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಗ್ರಾಮದಲ್ಲಿ ಸೋಮವಾರ ನ.9 ಮತ್ತು ನ.10 ದೀಪಾವಳಿ ಪಾಡ್ಯ ದಿನದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಭಿನ್ನ ವೈಭವ, ಸಡಗರದಿಂದ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ.
ಗ್ರಾಮದಲ್ಲಿ ನ.9ಮತ್ತುನ. 10ರಂದು ದೀಪಾವಳಿ ಪಾಡ್ಯ ದಿನ ಸಂಭ್ರಮಿಸುವ ಸುದಿನ. ಗ್ರಾಮದಲ್ಲಿ ದೀಪಾವಳಿ ಹಬ್ಬ ಬಂದರೆ ನಾಲ್ಕೈದು ದಿನ ಮನೆ ಮುಂದೆ ಹಣತೆಗಳ ಸಾಲು, ಬೆಳಕಿನಿಂದ ಬೆಳಗುವ ದೀಪ ಕಣ್ಣಿದುರು ಬಂದು ನಿಲ್ಲುತ್ತದೆ. ಅಲ್ಲದೇ ಊರಿನ ಪ್ರಮುಖ ಬೀದಿ ದೀಪ, ಹಾಗೂ ಎಲ್ಲಡೆ ವಿದ್ಯುತ್ ದೀಪ ಝಗಮಗಿಸುತ್ತವೆ.
ಸ್ಥಳೀಯ ಮನೆಗಳಲ್ಲಿ ಲಕ್ಷ್ಮೀ ಪೂಜೆ, ಉಡಿ ತುಂಬುವ, ಆರತಿ, ಆರಾಧನೆ ಮುಗಿದ ತಕ್ಷಣ ಸುಮಂಗಲೆಯರ ಊಟದ ಬಳಿಕ ಅಕ್ಕ-ಪಕ್ಕದ ಮನೆಯವರು, ಬಂಧು-ಬಾಂದವರನ್ನು ಕರೆದು ಭೋಜನ ಬಡಿಸುವ ಸಂಭ್ರಮ. ಮಕ್ಕಳು, ಹೆಣ್ಣುಮಕ್ಕಳು, ಪುರುಷರು ಸೇರಿದಂತೆ ಮನೆ ಮಂದಿಯಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ಹಬ್ಬದ ಪ್ರಯುಕ್ತ ತವರು ಮನೆಗೆ ಬಂದ ನವ ವಧುಗಳಾದ ಹೆಣ್ಣು ಮಕ್ಕಳಿಗೆ ಹಳ್ಳಿಯ ಮನೆಗಳಲ್ಲಿ ಅತಿಥಿ ಗೌರವ. ಹೀಗಾಗಿ ಮನೆ ಮಂದಿಯಲ್ಲಾ ಸೇರಿ ಸಂಭ್ರಮಿಸುವ ಸುದಿನವಾಗಿದೆ.
ಗ್ರಾಮದಲ್ಲಿ ಅಮವಾಸ್ಯೆ ಮತ್ತು ಪಾಡ್ಯ ದಿನದಂದು ಬೆಳಗ್ಗೆಯಿಂದ ರಾತ್ರಿ 10ಗಂಟೆ ತನಕ ಎಲ್ಲರ ಮನೆಗಳಲ್ಲಿ, ಜೀಪ್, ಟ್ಯಾಕ್ಟರ್ ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ, ಪೂಜೆ, ಪುರದೇವರ ದೇವಾಲಯಗಳಲ್ಲಿ ಪುರಜನರಿಂದ ಪೂಜಾ, ನೈವೇದ್ಯ ಸಮರೆ್ನ, ಊರಿನ ಎಲ್ಲ ದೇವಾಲಯಗಳಲ್ಲಿ ದೀಪೋತ್ಸವ, ಎಲ್ಲರ ಮನೆಗಳ ಮೇಲೆ ರಂಗು ರಂಗಿನ ಆಕಾಶ ಬುಟ್ಟಿಗಳು ವರ್ಣರಂಜಿತ ಜಗಮಗಿಸುವ ವಿದ್ಯುತ್ ದೀಪಗಳಿಂದ ನೋಡುಗರ ಕಣ್ಮನ ಸೆಳೆಯುತ್ತವೆ.