ಅಥಣಿ

ಶ್ರೀರಾಮ ಯಾರೋಬ್ಬರ ಸ್ವತ್ತಲ್ಲ: ರೇವಣಸಿದ್ಧಪ್ಪ ಧೂಪ

ಶ್ರೀರಾಮ ಯಾರೋಬ್ಬರ ಸ್ವತ್ತಲ್ಲ: ರೇವಣಸಿದ್ಧಪ್ಪ ಧೂಪ

ಅಥಣಿ 20: ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ 1991 ರಲ್ಲಿ ಕರ ಸೇವೆಗಾಗಿ ಅಯೋಧ್ಯೆಗೆ ಅಥಣಿಯಿಂದ 7 ಜನರಿರುವ ತಂಡದಲ್ಲಿ ನಾನು ಕೂಡ ತೆರಳಿದ್ದೆ ಎಂದು ಸಾಮಾಜಿಕ ಕಾರ್ಯಕರ್ತ ರೇವಣಸಿದ್ಧಪ್ಪ ಧೂಪ ತಮ್ಮ ಅನುಭವ ಹಂಚಿಕೊಂಡರು.        

ಅವರು ಶ್ರೀ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಕರ ಸೇವಕರಿಗೆ ಆಯೋಜಿಸಿದ್ದ ಗೌರವ ಸಮರೆ​‍್ಣ ಕಾರ್ಯಕ್ರಮದಲ್ಲಿ  ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು. ಅಂದು ಅಧಿಕಾರದಲ್ಲಿದ್ದ ಮುಲಾಯಂ ಸಿಂಗ ಸರಕಾರ ನಮ್ಮನ್ನು ಅರ್ಧಕ್ಕೆ ತಡೆದು ಅಯೋಧ್ಯೆ ತಲುಪದಂತೆ ಸಾಕಷ್ಟು ಪ್ರಯತ್ನ ಮಾಡಿದರೂ ಕೂಡ ನಾವು ಮಾತ್ರ ಕಷ್ಟ ಪಟ್ಟು ನಮ್ಮ ತಂಡ ಹತ್ತಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಕರ ಸೇವೆಗೂ ಮೊದಲೇ ಅಯೋಧ್ಯೆ ತಲುಪಿ ಕರ ಸೇವೆಯಲ್ಲಿ ಭಾಗವಹಿಸಿತು ಎಂದು ಹೇಳಿದರು. ಶ್ರೀರಾಮ ಯಾರೋಬ್ಬರ ಅಥವಾ ಯಾವುದೇ ಒಂದು ಪಕ್ಷದ ಸ್ವತ್ತಲ್ಲ. ರಾಮ ಸೇವಕ ಭಾರತಕ್ಕೆ ಮಾತ್ರ ಅಲ್ಲ ಇಡೀ ವಿಶ್ವಕ್ಕೆ ಆದರ್ಶ ಪುರುಷ. ಇಂತಹ ಆದರ್ಶ ವ್ಯಕ್ತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ನಮ್ಮ ತಂಡದಲ್ಲಿ ದಿ.ರಾಮಭವ ಮೊಕಾಶಿ, ದಿ.ಎನ್‌.ಕೆ.ಕುಲಕರ್ಣಿ, ಪ್ರಮೋದ ಜೋಶಿ, ರೇವಣಸಿಧ್ಧಪ್ಪ ಧೂಪ, ಪ್ರಕಾಶ ದೇಶಪಾಂಡೆ, ಸದಾಶಿವ ಲಂಗೋಟಿ, ಮನೋಜ ಅಥಣಿ ಇದ್ದರು ಎಂದ ಅವರು ಪ್ರಧಾನಿ ಮೋದಿಯವರ ಸತತ ಪ್ರಯತ್ನದ ಫಲವಾಗಿ ಇಂದು ಮಂದಿರ ಪೂರ್ಣಗೊಂಡಿರುವುದು ಸಂತೋಷದ ಸಂಗತಿ ಎಂದರು.          

ಮತ್ತೋರ್ವ ಕರ ಸೇವಕ ಸದಾಶಿವ ಲಂಗೋಟಿ ಮಾತನಾಡಿ, ನಾವು ಕರ ಸೇವೆಗೆ ಉತ್ತರ ಪ್ರದೇಶಕ್ಕೆ ತೆರಳಿದಾಗ ಅಲ್ಲಿನ ಸರಕಾರದ ವಿರೋಧದ ಮಧ್ಯೆಯೂ ಸಾಮಾನ್ಯ ಜನ ನಮ್ಮ ಕಾರ್ಯಕ್ಕೆ ಸಾಕಷ್ಟು ಸಹಾಯ, ಸಹಕಾರ ಮಾಡಿತು ಎಂದ ಅವರು ಶ್ರೀರಾಮ ಎಲ್ಲರ ಆರಾಧ್ಯ ದೈವ ಆತನ ಆದರ್ಶ ಜೀವನ ನಮಗೆಲ್ಲ ಮಾದರಿಯಾಗಬೇಕು ಎಂದರು.      

ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿಯ ರಮೇಶ ಕಾಗಲಿ, ಶಿವರುದ್ರ ಘೂಳಪ್ಪನವರ, ಅರುಣ ಭಾಸಿಂಗಿ, ಬಸವರಾಜ ಮರನೂರ, ಶ್ರೀಶೈಲ ನಾಯಿಕ, ನರಸು ಬಡಕಂಬಿ, ಸಂಗಪ್ಪಾ ಮಾಯನಟ್ಟಿ, ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ವೆಂಕಟೇಶ ದೇಶಪಾಂಡೆ, ಧುರೀಣರಾದ ಆನಂದ ದೇಶಪಾಂಡೆ, ದೀಪಕ್ ಟಿಕಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ