ಸಿಂಧಗಿ

ಸಾಮಾಜಿಕ ಜ್ಞಾನ ಹೊಂದಿದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ: ಅರುಣ

ಸಾಮಾಜಿಕ ಜ್ಞಾನ ಹೊಂದಿದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ: ಅರುಣ

ಸಿಂದಗಿ ೨೨; ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಶಿಕ್ಷಣದಿಂದ ದೂರ ಉಳಿದ ಅನೇಕರು ಇಂದು ಬೀದಿಬದಿ ವ್ಯಾಪಾರ ಮಾಡಿ ತಿಂಗಳಿಗೆ ಲಕ್ಷಾಂತರ ಹಣ ಗಳಿಸುತ್ತಿದ್ದಾರೆ. ಆದರೆ ಲಕ್ಷಾಂತರ ಹಣ ವಿನಿಯೋಗಿಸಿ ಶಿಕ್ಷಣ ಪಡೆದ ಮಕ್ಕಳು ಸಾವಿರಾರು ರೂಪಾಯಿ ದುಡಿಯಲು ಆಗುತ್ತಿಲ್ಲ ಇದಕ್ಕೆ ಕಾರಣ ಜ್ಞಾನದ ಕೊರತೆಯಾಗಿದೆ. ಕೇವಲ ಅಂಕಪಟ್ಟಿಯನ್ನಷ್ಟು  ಆಧರಿಸಿ ಕೆಲಸ ಹುಡುಕಿದರೆ ಸಾಲದು ಅದರೊಂದಿಗೆ ಸಾಹಿತ್ಯಿಕ, ಸಾಮಾಜಿಕ ಜ್ಞಾನ ಹೊಂದಿದರೆ ಮಾತ್ರ ಕೆಲಸವನ್ನು ಪಡೆಯಲು ಸಾಧ್ಯ ಎಂದು ದತ್ತಿ ದಾನಿಗಳು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.

ಪಟ್ಟಣದ ಊರನ ಹಿರಿಯಮಠ ಹಾಗೂ ತಾಲೂಕ ಶರಣ ಸಾಹಿತ್ಯ ಪರಿಷತ್, ವಚನೋತ್ಸವ ಸಮಿತಿ ಮತ್ತು ಅರುಣ ಶಹಾಪುರ ಗೆಳೆಯರ ಬಳಗ, ಸಿಂದಗಿ ಇವರುಗಳ ಸಂಯುಕ್ತಾಶ್ರದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ, 108ನೆಯ ವಚನೋತ್ಸವ ಹಾಗೂ ವಚನೋತ್ಸವ 108 ವಚನಗಳ ಸಂಕಲನ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ ಮೊಬೈಲ್ ಕಂಪ್ಯೂಟರ್, ಇಂಟರನೇಟ್ ಬಗ್ಗೆ ಎಷ್ಟು ಆಸಕ್ತಿಯಿದೆಯೋ ಅಷ್ಟು ಆಸಕ್ತಿ ಓದಿನಲ್ಲಿ, ಸಾಹಿತ್ಯದಲ್ಲಿ ಇಲ್ಲ ಅದಕ್ಕಾಗಿ ಮಕ್ಕಳಿಗೆ ಜ್ಞಾನದ ಕೊರತೆ ಕಂಡು ಬರುತ್ತಿದೆ ಕಾರಣ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕೆಲಸವನ್ನು ಕಡ್ಡಾಯವಾಗಿ ರೂಢಿ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ಸಿಂದಗಿ ತಾಲೂಕ ಘಟಕವು ಸುಮಾರು 2 ವರ್ಷಗಳಿಂದ ವಾರಕ್ಕೊಂದು ವಚನ ಕಾರ್ಯಕ್ರಮವನ್ನು 108  ಮಹಾ ಮನೆಗಳಲ್ಲಿ ಮಾಡಿ 108 ವಚನಗಳನ್ನು ಸಂಗ್ರಹಣೆ ಮಾಡಿದ್ದಾರೆ. ಇಂದಿನ ಯುವಕರ ಮನಸ್ಸನ್ನು ಸಮಾಜಮುಖಿ ಚಿಂತನೆಯತ್ತ ತಿರುಗಲು ಹನ್ನೆರಡೆಯ ಶತಮಾನದ ಬಸವಾದಿ ಶರಣರ ವಚನಗಳಲ್ಲಿನ ತಿರುಳನ್ನು ಅವರ ಮನಕ್ಕೆ ಮುಟ್ಟಿಸುವ ಅವಶ್ಯಕತೆವಿದೆ. ತಾಂತ್ರಿಕ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ವಚನ ಅಭಿಯಾನ ಹಮ್ಮಿಕೊಳ್ಳುತ್ತಿರುವುದು ವಿನೂತನ ಹಾಗೂ ವಿಶಿಷ್ಟ ಪ್ರಯೋಗವಾಗಿದೆ ಎಂದು ಹೇಳಿದರು. 

ತಾಲೂಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ  ಚನ್ನಪ್ಪ ಸಂಗಪ್ಪ ಕತ್ತಿ , ಇಂದು ದಿನಬೆಳಗಾದರೆ ವಾಟ್ಸಪ್, ಪೇಸ್‍ಬುಕ್‍ಗಳ ಮೂಲಕ ಮಿತ್ರ ಜೊತೆ ಹರಟೆ ಹೊಡೆಯುತ್ತ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುತ್ತಿರುವ ಇಂದಿನ ಯುವಕರ ಮನಸ್ಸನ್ನು ಈ ‘ವಾರಕ್ಕೊಂದು ವಚನ’ ಅಭಿಮಾನದ ಮೂಲಕ ವೈಚಾರಿಕ ಚಿಂತನೆಯತ್ತ ಮುಖ ಮಾಡಿಸುವ ಚಿಕ್ಕ ಪ್ರಯತ್ನ ಈ ಅಭಿಯಾನದ್ದಾಗಿದೆ ಎಂದರು.

ಸಾನಿಧ್ಯ ವಹಿಸಿದ ಗುರುಕುಲ ಭಾಸ್ಕರ್ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಆಶೀರ್ವದಿಸಿದರು. 

ಅಧ್ಯಕ್ಷತೆ ವಹಿಸಿದ ಶಿವಾನಂದ ಶಿವಾಚಾರ್ಯರು, ಬಸವರಾಜ ಧೂಳಗೊಂಡ ಶರಣರು, ಕೆಂಚಬಸವ ಶಿವಾಚಾರ್ಯರು, ರೋಜಾಮಠ ಗುಲ್ಬರ್ಗಾ, ರೇವಣಸಿದ್ಧ ಶಿವಾಚಾರ್ಯರು,  ಹಿರೇಮಠ್  ರಟಕಲ್  ಸಮ್ಮುಖ ವಹಿಸಿದ್ದರು. ಚನ್ನಬಸವ ದೇವರು ವಿರಕ್ತಮಠ ವಂಶಿ, ಶಿವಪ್ರಸಾದ ದೇವರು, ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಗದಗ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪುರ, ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ, ಗ್ರಂಥದಾನಿ ಪ್ರೊ.ಡಿ.ಎಂ.ಸರಶೆಟ್ಟಿ, ಪೂರ್ಣಿಮಾ ಸರಶೆಟ್ಟಿ, ರಾಜಶೇಖರ ಶಹಾಪೂರ, ಮಾಂತಪ್ಪ ಸಿಪಾಯಿ ಸೇರಿದಂತೆ ಇನ್ನಿತರರು ಇದ್ದರು. 

ಸುದ್ದಿ ಓದಿ