ಅಥಣಿ

ಅಧ್ಯಕ್ಷರಾಗಿ ಶಿವಾನಂದ ಉಪಾಧ್ಯಕ್ಷೆಯಾಗಿ ಭಾರತಿ ಅವಿರೋಧ ಆಯ್ಕೆ

ಅಧ್ಯಕ್ಷರಾಗಿ ಶಿವಾನಂದ ಉಪಾಧ್ಯಕ್ಷೆಯಾಗಿ ಭಾರತಿ ಅವಿರೋಧ ಆಯ್ಕೆ

ಅಥಣಿ 20: ಹೊಸಟ್ಟಿಯ ಸಿದ್ಧೇಶ್ವರ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಕಟ್ಟಾ ಬೆಂಬಲಿಗ ಶಿವಾನಂದ ಮಲ್ಲಪ್ಪ ನಾಯಿಕ ಮತ್ತು ಉಪಾಧ್ಯಕ್ಷೆಯಾಗಿ ಭಾರತಿ ಧರ್ಮಣ್ಣಾ ಹಲ್ಯಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಶಿವಾನಂದ ನಾಯಿಕ ಇವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಹೊಸಟ್ಟಿ ಸಹಕಾರ ಸಂಘದ ಚುನಾವಣೆಯಲ್ಲಿ ನನ್ನ ಬೆಂಬಲಿಗ ಶಿವಾನಂದ ನಾಯಿಕ ಅವಿರೋಧವಾಗಿ ಆಯ್ಕೆಯಾಗಿದ್ದು, ಪ್ರಸಕ್ತ ವರ್ಷದಲ್ಲಿ 30 ಸಹಕಾರ ಸಂಘಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಗಳಲ್ಲಿ ಎಲ್ಲ ಸಹಕಾರ ಸಂಘಗಳಲ್ಲಿ ನಮ್ಮ ಬೆಂಬಲಿಗರೇ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಅವರು ಯಾರು ಜನರ ಮಧ್ಯೆ ಇದ್ದು ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೋ ಅಂತಹ ವ್ಯಕ್ತಿಗಳು ಮಾತ್ರ ಸಂಘ ಸಂಸ್ಥೆಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ ಎಂದರು.       ಅವಿರೋಧ ಆಯ್ಕೆ ಪ್ರಕ್ರಿಯೆ ಮುಕ್ತಾಯದ ನಂತರ  ಹೊಸಟ್ಟಿ ಗ್ರಾಮದಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ನೂತನ ಅಧ್ಯಕ್ಷ ಶಿವಾನಂದ ನಾಯಿಕ,  ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿಯವರ ಮಾರ್ಗದರ್ಶನ ಮತ್ತು ನೇತೃತ್ವದ ಪೆನಲ್ ನ ಹೆಚ್ಚು  ಅಭ್ಯರ್ಥಿಗಳು ಜಯಶಾಲಿಯಾದ ಪರಿಣಾಮ ನಾನು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದ ಅವರು ಶಾಸಕರ ಮಾರ್ಗದರ್ಶನದಲ್ಲಿ ಸಹಕಾರ ಸಂಘದ ಕೆಲಸ ಮುಂದುವರೆಸಿಕೊಂಡು ಹೋಗುವೆ ಎಂದರು. 

ಕಾಂಗ್ರೆಸ್ ಮುಖಂಡ ಶ್ರೀಶೈಲ ನಾಯಿಕ ಮಾತನಾಡಿ,  ಮೂರು ವರ್ಷಗಳ ಹಿಂದೆ ಶಾಸಕ ಲಕ್ಷ್ಮಣ ಸವದಿ ಹೊಸಟ್ಟಿ ಗ್ರಾಮಕ್ಕೆ ಶ್ರೀ ಸಿದ್ಧೇಶ್ವರರ ಹೆಸರಿನಲ್ಲಿ ಸಹಕಾರ ಸಂಘವನ್ನು ಪ್ರಾರಂಭಿಸಿಕೊಟ್ಟು  ಬಿಡಿಸಿಸಿ ಬ್ಯಾಂಕ ಮೂಲಕ 65 ಲಕ್ಷ ರೂ.ಗಳಷ್ಟು ಪತ್ತು ಮಂಜೂರು ಮಾಡಿಸಿಕೊಟ್ಟಿದ್ದರು. ಇದರಂದ ಹಂತ ಹಂತವಾಗಿ ಬೆಳೆದ ನಮ್ಮ ಸಹಕಾರಿ ಸಂಘಕ್ಕೆ ಪ್ರಸಕ್ತ ವರ್ಷದಲ್ಲಿ 1 ಕೋಟಿ 50 ಲಕ್ಷ ರೂ.ಗಳ ಪತ್ತು ಮಂಜೂರಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಶಾಸಕ ಸವದಿಯವರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘವನ್ನು ಮತ್ತಷ್ಟು ಎತ್ತರೆತ್ತರಕ್ಕೆ ಬೆಳೆಸಿಕೊಂಡು ಹೋಗುತ್ತೇವೆ ಎಂದರು. ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ನಾಯಿಕ ಮತ್ತು  ಉಪಾಧ್ಯಕ್ಷ  ಸ್ಥಾನಕ್ಕೆ ಭಾರತಿ ಧರ್ಮಣ್ಣಾ ಹಲ್ಯಾಳ ಈ ಇಬ್ಬರು ಅಭ್ಯರ್ಥಿಗಳು ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದ ಇಬ್ಬರೂ ತಮ್ಮ ತಮ್ಮ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು. 

ಹಣಮಂತ ನಾಯಿಕ, ಚಂದು ಪವಾರ, ಅಣ್ಣಪ್ಪಾ ನಾಯಿಕ, ರಾವಸಾಹೇಬ ನಾಯಿಕ, ರಾಜು ಹಣಮಾಪುರೆ, ನಿಂಗಪ್ಪ ಹಣಮಾಪುರೆ, ಕೃಷ್ಣಾ ಸರಗರ, ಪಾಂಡು ಹಲ್ಯಾಳ, ಸಿದ್ಧಲಿಂಗ ನಾಯಿಕ, ಗ್ರಾ.ಪಂ ಸದಸ್ಯ ಸಂಜಯ ಹಣಮಾಪುರೆ, ಅರ್ಜುನ ನಾಯಿಕ, ಕುಮಾರ ಅಲಾಸೆ, ಬಸು ಅಲಾಸೆ, ಚನ್ನಪ್ಪ ಜಗದಾಳೆ,  ಸಹದೇವ ಜಗದಾಳೆ, ಚಿದಾನಂದ ದರೂರ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.    

ಗ್ರಾಮದಲ್ಲಿ ಯುವಕರ ದಂಡು ಪಟಾಕಿ ಸಿಡಿಸಿ, ಒಬ್ಬರಿಗೊಬ್ಬರು ಗುಲಾಲ ಎರಚಿ ವಿಜಯೋತ್ಸವ ಆಚರಿಸಿದರು. 


ಸುದ್ದಿ ಓದಿ