ಬೆಳಗಾವಿ

ಅವಧಿ ಮೀರಿದ ಲಕ್ಷಾಂತರ ರೂ. ಮೌಲ್ಯದ ಲಸಿಕೆ ಪತ್ತೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಉಪ ಲೋಕಾಯುಕ್ತರ ಸೂಚನೆ

ಅವಧಿ ಮೀರಿದ ಲಕ್ಷಾಂತರ ರೂ. ಮೌಲ್ಯದ ಲಸಿಕೆ ಪತ್ತೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಉಪ ಲೋಕಾಯುಕ್ತರ ಸೂಚನೆ

ಬೆಳಗಾವಿ, ಅ.29: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್)ಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಆಸ್ಪತ್ರೆಯ ವಿವಿಧ ವಿಭಾಗಗಳ ಕಾರ್ಯವೈಖರಿಯನ್ನು ಪರಿಶೀಲಿಸಿ, ಅವಧಿ ಮೀರಿದ ಲಕ್ಷಾಂತರ ರೂಪಾಯಿ ಮೌಲ್ಯದ ಲಸಿಕೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಿಮ್ಸ್‌ನ ನೋಂದಣಿ ಕೌಂಟರ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆದ ಅವರು, ಒಳರೋಗಿಗಳ ವಿಭಾಗ, ತೀವ್ರ ನಿಗಾ ಘಟಕ, ಪ್ರಸೂತಿ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳೊಂದಿಗೆ ಮಾತನಾಡಿ, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ರೋಗಿಗಳು ಪೌಷ್ಟಿಕ ಆಹಾರ ಸೇವಿಸುವಂತೆ ಸಲಹೆ ನೀಡಿದ ಅವರು, ಶೀಘ್ರ ಗುಣಮುಖರಾಗುವಂತೆ ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಗಾಯಗೊಂಡಿದ್ದ ರೋಗಿಯೊಬ್ಬರಿಗೆ ತ್ವರಿತವಾಗಿ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಹೊರರೋಗಿಗಳ ನೋಂದಣಿ ವಿಭಾಗಕ್ಕೆ ಭೇಟಿ ನೀಡಿದ ಅವರು, ನೋಂದಣಿ ಪ್ರಕ್ರಿಯೆ ಪರಿಶೀಲಿಸಿ ರೋಗಿಗಳಿಂದ ಆಸ್ಪತ್ರೆಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆದರು. ಹೊರರೋಗಿಗಳ ಔಷಧ ವಿತರಣಾ ಕೇಂದ್ರಗಳಿಗೂ ಭೇಟಿ ನೀಡಿ, ರೋಗಿಗಳ ಅನುಕೂಲಕ್ಕಾಗಿ ಔಷಧ ವಿತರಣಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚಿಸಿದರು.

ಆಸ್ಪತ್ರೆಯ ವೈದ್ಯರು ರೋಗಿಗಳಿಂದ ಹಣ ಪಡೆಯದಂತೆ ಹಾಗೂ ಹೊರಗಿನಿಂದ ಔಷಧ ಖರೀದಿಸುವಂತೆ ಚೀಟಿ ಬರೆದುಕೊಡದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಿಮ್ಸ್‌ನ ಔಷಧ ಉಗ್ರಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೇಬಿಸ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಲಸಿಕೆಗಳು ಪತ್ತೆಯಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಹಾಗೂ ನಿರ್ಲಕ್ಷ್ಯ ತೋರಿದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ನಂತರ ಬಿಮ್ಸ್ ರಕ್ತ ಭಂಡಾರಕ್ಕೆ ಭೇಟಿ ನೀಡಿದ ಅವರು, ವಿವಿಧ ರಕ್ತದ ಗುಂಪುಗಳ ಲಭ್ಯತೆ ಹಾಗೂ ದಾಸ್ತಾನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಉಪನಿಬಂಧಕ ಅರವಿಂದ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಐ.ಪಿ. ಗಡಾದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ