ಲಕ್ಷಾಂತರ ಭಕ್ತರಿಗೆ ದತ್ತ ಮಹಾರಾಜರ ಜಾತ್ರಾ ಮಹಾಪ್ರಸಾದ ವ್ಯವಸ್ಥೆ
ಬೆಳಗಾವಿ 29: ತಾಲೂಕಿನ ಸುಕ್ಷೇತ್ರ ಪಂತ ಬಾಳೇಕುಂದ್ರಿಯ ದತ್ತ ಮಹಾರಾಜರ 121ನೇ ಪುಣ್ಯತಿಥಿ ಉತ್ಸವದ ಅಂಗವಾಗಿ ಗುರುವಾರ ಮಧ್ಯಾಹ್ನ ಲಕ್ಷಾಂತರ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪವಾಡ ಪುರುಷ ದತ್ತ ಮಹಾರಾಜರ ಪುಣ್ಯತಿಥಿ ನಿಮಿತ್ತ ದಿ. 27 ರಿಂದ ಪ್ರಾರಂಭವಾಗಿರುವ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಉತ್ಸವ ಜರುಗಿತು.
ಉತ್ಸವದ ಸಮಾರೋಪದ ಅಂಗವಾಗಿ ಮೂರನೇ ದಿನ ದತ್ತ ಸಂಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತ ಮಂಡಳಿಯ ನೇತೃತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಪಂತ ಬಾಳೇಕುಂದ್ರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ದತ್ತ ಮಹಾರಾಜರ ದೇವಸ್ಥಾನ ಮಾತ್ರವಲ್ಲದೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿಯೂ ಜನಸಂದಣಿ ಕಂಡುಬಂದಿತು.
ಗ್ರಾಮಕ್ಕೆ ಹೊಂದಿಕೊಂಡಿರುವ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಭಕ್ತರ ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಈ ಸಂದರ್ಭದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡು, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದರು. ಪ್ರತಿವರ್ಷ ನಡೆಯುವ ದತ್ತ ಮಹಾರಾಜರ ಮೂರು ದಿನಗಳ ಪುಣ್ಯತಿಥಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಉತ್ಸವಕ್ಕೆ ಮೆರುಗು ತಂದ್ದುಕೊಟ್ಟರು.