ಇಂಡಿ

ವಿಜೃಂಭಣೆಯಿಂದ ಆರಂಭವಾದ ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವ

ವಿಜೃಂಭಣೆಯಿಂದ  ಆರಂಭವಾದ ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವ

ಇಂಡಿ14:  ಪಟ್ಟಣದ ಆರಾಧ್ಯ ದೈವ ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವ ಎರಡು ದಿನಗಳಿಂದ ಅತೀ ವಿಜೃಂಭಣೆಯಿಂದ ನಡೆದಿದೆ. 

ಇಂಡಿಯ ಶಾಂತಯ್ಯನವರ ಜಾತ್ರೆ ಈ ಭಾಗದಲ್ಲಿ ವಿಶೇಷ. ಛಟ್ಟಿ ಅಮವಾಸ್ಯೆ ನಂತರದ ಚಂಪಾಷಷ್ಠಿ ಆದ ಮೇಲೆ ಬರುವ ಸೋಮವಾರದಿಂದ ಬುಧವಾರದವರೆಗೆ ಮೂರು ದಿನ ಜಾತ್ರೆ ವೈಭವದಿಂದ ನಡೆಯುತ್ತದೆ. ಬಾರಾ ಬಲೂತಿ ಚಾಜದವರಾದ ಪಟ್ಟಣದ ಗೌಡರು, ಬಿರಾದಾರರವರು, ನಾಡಗೌಡರು, ದೇಶಪಾಂಡೆಯವರು, ಬಗಲಿಯವರು, ದೇವಾಲಯದ ಅರ್ಚಕರು, ಪುರವಂತರು, ಕುಂಬಾರರು, ಅಕ್ಕಸಾಲಿಗರು, ಬಡಿಗರು, ಕುಂಬಾರರು, ಅಗಸರು, ಮೇತ್ರಿಯವರು ಹೀಗೆ ಹನ್ನೆರಡು ಚಾಜದವರು  ಕೂಡಿಕೊಂಡು ಪಟ್ಟಣದ ಎಲ್ಲ ಸಮೂದಾಯದ ಭಕ್ತರು ಮತ್ತು ದಲಿತರು, ಮುಸ್ಲಿಮರು ಸೇರಿಕೊಂಡು ಭಾವೈಕ್ಯತೆಯಿಂದ ಅಪಾರ ಭಕ್ತ ಸಮೂಹದೊಂದಿಗೆ ಜಾತ್ರೆ ಮಾಡುವುದು ಇಲ್ಲಿನ ವಾಡಿಕೆಯಾಗಿದೆ. 

ಅಕ್ಕಿ ಪೂಜೆ: 

 ಚಂಪಾಷಷ್ಟಿಯ ನಂತರ ಬರುವ ಸೋಮವಾರದ ದಿನ ಬೆಳಗಿನ ಆರು ಗಂಟೆಯಿಂದ ಶಾಂತೇಶ್ವರ ಲಿಂಗಕ್ಕೆ ಪಂಚಾಮೃತ ಅಭಿಷೇಕ ನಡೆಯುತ್ತದೆ. ಜಾತ್ರೆಯ ಎರಡನೆಯ ದಿನ ಮಂಗಳವಾರ ಬೆಳಗ್ಗೆ  ನಸುಕಿನ ನಾಲ್ಕು ಗಂಟೆಯಿಂದ ಲಿಂಗಕ್ಕೆ ಅಕ್ಕಿಪೂಜೆ ಮಾಡುತ್ತಾರೆ. ಸುಮಾರು ಮೂರರಿಂದ ನಾಲ್ಕು ಕ್ವಿಂಟಲ್ ಅಕ್ಕಿಯನ್ನು ನೀರಲ್ಲಿ ತೋಯಿಸುತ್ತ ಲಿಂಗದ ಸುತ್ತಲೂ ಪೆರಿಸುತ್ತಾರೆ. ಅಕ್ಕಿ ಬಿಳಬಾರದೆಂದು  ದಾರದಿಂದ ಸುತ್ತುತ್ತಾರೆ. ಮಧ್ಯೆ ಬಣ್ಣದ ಬ್ಯಾಂಗಡಿ, ಹೂವು ಜಾಲರಿಗಳಿಂದ ಶೃಂಗರಿಸುತ್ತಾರೆ. ಆ ಸಮಯದಲ್ಲಿ ಗರ್ಭಗುಡಿಯಲ್ಲಿ ಒಳಗೆ ಯಾರೂ ಪ್ರವೇಶಿಸದಂತೆ ಬಾಗಿಲು ಹಾಕಿರುತ್ತಾರೆ. ಊರಗೌಡರು ಬಂದಾಗ ಮಾತ್ರ ಬೆಳಗಿನ ಆರು ಗಂಟೆಗೆಬಾಗಿಲು ತೆರೆದು ಮಹಾಮಂಗಳಾರತಿ ಮಾಡುತ್ತಾರೆ. ಶಾಂತಪ್ಪ ಭೀಮಣ್ಣ ಪೂಜಾರಿ ಈ ವರ್ಷ ಸೇರಿದಂತೆ ಪ್ರತಿ ವರ್ಷ ಅಕ್ಕಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.  

ನಂದಿಕೋಲು ಮೆರವಣೆಗೆ: 

ಮಂಗಳವಾರ ಬೆಳಗ್ಗೆ ಎರಡು ನಂದಿಕೋಲುಗಳನ್ನು ಸಿಂಗರಿಸುತ್ತಾರೆ. ಒಂದು ದೊಡ್ಡದು ಶಾಂತಯ್ಯನೆಂದು ಇನ್ನೊಂದು ಚಿಕ್ಕದು ಅವರ ತಮ್ಮನೆಂದು ಭಕ್ತರ ನಂಬುಗೆ. ಶಾಂತಯ್ಯನವರದೆಂದು ಹೇಳುವ ನಂದಿಕೋಲಿಗೆ ಹೂವಿನಿಂದ ದೊಡ್ಡ ದೊಡ್ಡ ಬಾಸಿಂಗದಿಂದ ಅಲಂಕಾರ ಮಾಡಿರುತ್ತಾರೆ. ತಮ್ಮನದೆಂದು ಹೇಳುವ ನಂದಿಕೋಲಿಗೆ ಬಿಳಿ ಮತ್ತು ಕೆಂಪು ವಸ್ತ್ರ ಸುತ್ತಿ ಪಂಚಲೋಹದ ಒಂಬತ್ತು ತೊಡೆ ತೊಡಿಗೆ ಮೇಲೆ ಹೂವಿನ ಅಟ್ಟಾವೀಸ ಹೆಗೆದಿರುತ್ತಾರೆ. 

ಬುಧವಾರ ನಸುಕಿನ ವೇಳೆ ಕಳ್ಳಿಮಠದಿಂದ ಶಾಂತೇಶ್ವರ ದೇವಸ್ಥಾನದ ವರೆಗೆ ಎರಡೂ ನಂದಿಕೋಲಗಳ ಮೆರವಣೆಗೆ ನಡೆಯುತ್ತದೆ. ಹೀಗೆ ಮೂರು ದಿನಗಳ ಕಾಲ ನಗರದ ಸಾರ್ವಜನಿಕರು ಆರಾಧ್ಯ ದೇವತೆಯ ಜಾತ್ರೆಯಲ್ಲಿ ಪಾಲ್ಗೊಂಡು ವಿಜೃಂಭಣೆಯಿಂದ ಆಚರಿಸಿ ಭಕ್ತಿ ಸಮರ್ಪಿಸುತ್ತಾರೆ.

ಸುದ್ದಿ ಓದಿ