ದಣಿವರಿಯದ ಸತ್ಯಸಾಧಕಿ ಸಾವಿತ್ರಿಬಾಯಿ: ಸಂತೋಷ
ಇಂಡಿ03: ಶಿಕ್ಷಣದ ಮೂಲಕ ತಳಸಮುದಾಯಗಳ ಬದುಕಿನಲ್ಲಿ ಸುಧಾರಣೆಗಳಿಗೆ ಕಾರಣರಾದ ಫುಲೆ ದಂಪತಿಗಳು ವಿಶ್ವ ಭ್ರಾತೃತ್ವ, ಮಕ್ಕಳ ಸೂಕ್ಷ್ಮತೆ, ಬೌದ್ಧಿಕವಾಗಿ ಹೆಚ್ಚು ವಸ್ತುನಿಷ್ಠವಾದ ಮತ್ತು ಸಾಮಾಜಿಕ ಸುಧಾರಣೆ ಮಾಡಿ,ಇಂದಿನ ಪೀಳಿಗೆಗೆ ಪ್ರೇರಕಶಕ್ತಿಯಾಗಿದ್ದಾರೆ ಎಂದು ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಇಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
19 ನೇ ಶತಮಾನದ ಮೊದಲ ಹಾಗೂ ಮಧ್ಯ ಭಾಗದಲ್ಲಿ ಅಂದಿನ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಬಯಸಿದ್ದ ಸಾವಿತ್ರಿಬಾಯಿ ಆಗಿನ ಶಿಕ್ಷಣ ವ್ಯವಸ್ಥೆಯ ದೃಷ್ಟಿಕೋನವನ್ನೇ ಪರಿವರ್ತನೆ ಮಾಡಿದರು ಎಂದು ಹೇಳಿದರು.
ಮುಖ್ಯ ಅಥಿತಿಗಳಾದ ಕೆಜಿಎಸ್ ಶಾಲಾ ಮುಖ್ಯ ಗುರುಗಳಾದ ಸುರೇಶ ಅಂಕಲಗಿ ಮಾತನಾಡಿ, ಜಾಗತಿಕವಾಗಿ ಲಭ್ಯವಿರುವ ಆಧುನಿಕ ಶಿಕ್ಷಣವನ್ನು, ಪಠ್ಯವನ್ನು ಅಳವಡಿಸಿಕೊಂಡು, ಮಕ್ಕಳ ಸೂಕ್ಷ್ಮತೆಯನ್ನಾಧರಿಸಿ ಬೋಧನೆಯ ಕ್ರಮವನ್ನು ರೂಪಿಸಬೇಕೆಂದು ಸಾವಿತ್ರಿಬಾಯಿ ಅವರ ಅಭಿಲಾಷೆ ಆಗಿತ್ತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ, ಬೌದ್ಧಿಕವಾಗಿ ವಿಮರ್ಶಾತ್ಮಕವಾದ, ವಸ್ತುನಿಷ್ಠವಾದ ಕಲಿಕೆಯನ್ನು ಬೆಂಬಲಿಸುವುದು. ಸಾಮಾಜಿಕ ಸುಧಾರಣೆಗಳನ್ನು, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆಧ್ಯತೆಯ ಮೇರೆಗೆ ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಿಕೊಳ್ಳುವದು ಅವಶ್ಯ ಎಂದು ಸಾವಿತ್ರಿಬಾಯಿ ಬಲವಾಗಿ ಇಚ್ಚೆಪಟ್ಟಿದ್ದರು ಎಂದು ಹೇಳಿದರು. ಎಸ್ ಎಚ್ ಮೈದರಗಿ,ಎಸ್ ಪಿ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.