ಸಚಿವ ಸ್ಥಾನಕ್ಕೆ ರುದ್ರಪ್ಪ ಲಮಾಣಿ ಅವರನ್ನು ಪರಿಗಣಿಸಬೇಕು: ರಾಮಣ್ಣ ನಾಯಕ್
ರಾಣೆಬೆನ್ನೂರು ಮೇ 30 ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಬೇಕೆನ್ನುವ ಅಚಲ ನಿರ್ಧಾರದಿಂದ ಒಂದು ಅಂಶದ ಕಾರ್ಯಕ್ರಮವನ್ನು ಹಾಕಿಕೊಂಡ ರಾಜ್ಯದ ಲಂಬಾಣಿ ಸಮುದಾಯ ನಿರ್ಧರಿಸಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಸಮುದಾಯದ ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರು ಸರಕಾರದ ಮುಖ್ಯಮಂತ್ರಿಯು ಸಹಾ ಆಗಿದ್ದಾರೆ. ಆದರೆ ಸಂಪುಟದಲ್ಲಿ ಸಮುದಾಯದ ಏಕೈಕವಾಗಿ ಆಯ್ಕೆಯಾದ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಪರಿಗಣಿಸದೆ ನಿರ್ಲಕ್ಷತನ ವಹಿಸಿರುವುದು ವಿಷಾಧಕರ ಸಂಗತಿಯಾಗಿದೆ ಎಂದು ತಾಲೂಕ ಬಂಜಾರ ಲಂಬಾಣಿ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಎಪಿಎಂಸಿ ಸದಸ್ಯ ರಾಮಣ್ಣ ನಾಯಕ್ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಬರುವಲ್ಲಿ ಬಂಜಾರ ಸಮುದಾಯ ರಾಜ್ಯದಾದ್ಯಂತ ಒಕ್ಕೂರಲ ನಿರ್ಧಾರ ಮಾಡಿ ಗೆಲುವಿಗೆ ಕಾರಣವಾಗಿದೆ. ಸಮುದಾಯ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಬರುವಲ್ಲಿ ಶ್ರಮಿಸಿದ್ದೇವೆ ಹೀಗಾಗಿ ಸಮುದಾಯದ ಏಕೈಕ ವ್ಯಕ್ತಿಯಾಗಿರುವ ರುದ್ರಪ್ಪ ಲಮಾಣಿ ಅವರನ್ನು ಸಚಿವರನ್ನಾಗಿ ಮಾಡಬೇಕಾಗಿತ್ತು, ಸಮುದಾಯಕ್ಕೆ ತುಂಬಾ ಅನ್ಯಾಯವಾಗಿದೆ ಕೂಡಲೇ ಮುಂದಿನ ದಿನಗಳಲ್ಲಿ ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಇಲ್ಲವಾದಲ್ಲಿ ಬಂಜಾರ ಲಂಬಾಣಿ ಸಮುದಾಯದ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ರಾಮಣ್ಣ ನಾಯಕ್ ಸರ್ಕಾರಕ್ಕೆ ಎಚ್ಚರಿಸಿದರು.ಬಿಜೆಪಿ ಸರಕಾರದ ಒಳಮೀಸಲಾತಿ ನಡೆ ಅವರ ಸೋಲಿಗೆ ಬಹು ಮುಖ್ಯ ಕಾರಣವಾದಂತಾಗಿದೆ ಒಳ ಮೀಸಲಾತಿ ನಡೆಯನ್ನ ವಿರೋಧಿಸಿ ಇತ್ತೀಚಿಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಇಡೀ ಕರ್ನಾಟಕದ ಬಂಜಾರ ಸಮುದಾಯ ಒಮ್ಮತದ ನಿರ್ಣಯದ ಮೇರೆಗೆ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿತು.
ಹಾವೇರಿ ಜಿಲ್ಲೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರಿದ್ದು ಸೌಜನ್ಯಕ್ಕಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬಹುದಿತ್ತು, ಈ ಮೊದಲು ಬ್ಯಾಡಗಿ ಕ್ಷೇತ್ರದ ಬಸವರಾಜ್ ಶಿವಣ್ಣವರ ಅಥವಾ ಹಾವೇರಿ ಕ್ಷೇತ್ರದ ರುದ್ರಪ್ಪ ಲಮಾಣಿ ಅವರನ್ನು ಮೊದಲ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ಇಡೀ ಕರ್ನಾಟಕದ ಬಂಜಾರ ಸಮುದಾಯದ ನಂಬಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಸಿಗೊಳಿಸಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಸೂಕ್ತ ಸ್ಥಾನಮಾನ ನೀಡದೆ ಇದ್ದಲ್ಲಿ ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳನ್ನು ಕರ್ನಾಟಕದಾದ್ಯಂತ ಬಂಜಾರ ಸಮುದಾಯ ಒಕ್ಕೂರಲಿನಿಂದ ಬಹಿಷ್ಕರಿಸಲಿದೆ ಎಂದರು ರಾಜ್ಯದಲ್ಲಿ ನಲವತ್ತೆಳು ಲಕ್ಷ ಬಂಜಾರ ಜನಾಂಗ ಇದ್ದು, ರಾಜ್ಯದ ನಾಯಕರು ಸಣ್ಣ ಸಮುದಾಯವೆಂದು ಕಡೆಗಣನೆ ಮಾಡುತ್ತಿದ್ದು ಅನುಮಾನವಿದ್ದರೆ ಕೂಡಲೇ ಬಂಜಾರಾ ಸಮುದಾಯದ ಜನಗಣತಿ ಮಾಡಲಿ, ಕಾಂಗ್ರೆಸ್ಸ್ ಸರ್ಕಾರದಲ್ಲಿ ಈ ಬಾರಿ ಸಮುದಾಯಕ್ಕೆ ಅನ್ಯಾಯವಾಗಿದೆ, ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ಸಿದ್ದಾಂತ ಇಲ್ಲಿ ಕಾಣದಂತಾಗಿದೆ ಕೇವಲ ಕೆಲವು ಸಮುದಾಯಗಳ ಓಲೈಕೆಯ ಪ್ರಭಾವಕ್ಕೆ ಒಳಗಾದಂತೆ ಕಂಡುಬರುತ್ತಿದೆ ಎಂದು ಬಲವಾಗಿ ಆರೋಪಿಸಿದರು. ಮಾಧ್ಯಮಗೋಷ್ಠಿಯಲ್ಲಿ ತಾಲೂಕ ಬಂಜಾರ ಲಂಬಾಣಿ ಸೇವಾ ಸಮಿತಿಯ ಮುಖಂಡರಾದ ಖೋಬಾ ನಾಯಕ, ಟಿ.ಕೆ.ಲಮಾಣಿ, ಶಿವಪ್ಪ ಲಮಾಣಿ, ಗಣೇಶ ಲಮಾಣಿ, ಮಾನಪ್ಪ ಲಮಾಣಿ, ಬಿರೇಶ್ ಲಂಬಾಣಿ, ಎಚ್ ಎಮ್ ಲಮಾಣಿ, ಮಾಲತೇಶ್ ಲಮಾಣಿ ಸೇರಿದಂತೆ ಸಮಿತಿಯ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.