ಇಂಡಿ

ನೀರಾವರಿ ವಂಚಿತ ಪ್ರದೇಶಗಳಿಗೆ ಸೌಲಭ್ಯ ಒದಗಿಸಬೇಕು: ಪಾಟೀಲ

ನೀರಾವರಿ ವಂಚಿತ ಪ್ರದೇಶಗಳಿಗೆ ಸೌಲಭ್ಯ ಒದಗಿಸಬೇಕು: ಪಾಟೀಲ


ಇಂಡಿ 22:  ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಚಡಚಣ  ಹಾಗೂ ವಿಜಯಪೂರ ತಾಲೂಕಿನ 64 ಹಳ್ಳಿಗಳ ನೀರಾವರಿ ವಂಚಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕು ಎಂದು ರೈತಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಸತ್ಯಾಗ್ರಹ, ಉಪವಾಸ,ಧರಣಿ ನಡೆಸಿರುವದು ಸರಕಾರದ ಗಮನಕ್ಕೆ ಬಂದಿದೆಯೇ, ನೀರಾವರಿ ವಂಚಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಸರಕಾರ ಆಸಕ್ತಿ ಹೊಂದಿದ್ದರೆ, ಅದರ ರೂಪರೇಷಗಳ ಕುರಿತು ವಿವರ ನೀಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಬೆಳಗಾವಿ ಅಧಿವೇಶನದಲ್ಲಿ ಸದನದಲ್ಲಿ ಚುಕ್ಕೆ ಪ್ರಶ್ನೆ ಮೂಲಕ ಸಚಿವರ ಗಮನ ಸೆಳೆದರು.   

ಝಳಕಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನ ಹಿಂದೆ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಚಾಲನೆಗೆ ಆಗ್ರಹಿಸಿ  ನೀರಾವರಿಗಾಗಿ ರೈತ ಸಂಘಟನೆಗಳು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಸತ್ಯಾಗ್ರಹ  ಸ್ಥಳಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ,ರೈತರ ಬೇಡಿಕೆಗಳನ್ನು  ಈಡೇರಿಸುವ ಕುರಿತು ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದ್ದರು. 

ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ರೈತರ ಬೇಡಿಕೆ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಗಮನ ಸೆಳೆದರು. ಈ ವಿಷಯ ಸರಕಾರದ ಗಮನಕ್ಕೆ ಬಂದಿದ್ದರೆ  ಸದರಿ ನೀರಾವರಿ ವಂಚಿತ ಪ್ರದೇಶಗಳಿಗೆ  ನೀರಾವರಿ ಸೌಲಭ್ಯ ಒದಗಿಸಲು ಸರಕಾರ ಆಸಕ್ತಿ ಹೊಂದಿದೆಯೇ, ಹೊಂದಿದ್ದಲ್ಲಿ, ಅದರ ರೂಪರೇಷೆಗಳೇನು ವಿವರ ನೀಡಬೇಕು. 

ಸದರಿ ಯೋಜನೆಯಲ್ಲಿ ಜಾರಿಗೊಳಿಸಲು ಅಯವ್ಯಯದಲ್ಲಿ ಘೋಷಣೆ ಮಾಡಿರುವದು ನಿಜವೇ,ಈ ಕಾಮಗಾರಿಗಾಗಿ ಕಾಯ್ದಿರಿಸಿದ ಅನುದಾನ ಎಷ್ಟು ಎಂದು ವಿವರ ನೀಡಲು ಕೇಳಿದರು. ಈ ಯೋಜನೆಗೆ ಇದು ವರೆಗೂ ಮಂಜೂರು ಮಾಡಿರುವ ಅನುದಾನ ಎಷ್ಟು, ವರ್ಷವಾರು ವಿವರ ಜಾರಿಗೊಳಿಸಲು ಸರಕಾರ ಆಸಕ್ತಿ ಹೊಂದಿದೆಯೇ ಎಂದು ಪ್ರಶ್ನೆ ಕೇಳಿದರು. 

ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರವರು  ಝಳಕಿಯಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಕುರಿತು ನಡೆದ ಹೋರಾಟ ಸರಕಾರದ ಗಮನಕ್ಕೆ ಬಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ -3 ರಡಿಯ ಮುಳವಾಡ ಏತ ನೀರಾವರಿ ಉಪ ಯೋಜನೆ ಅಡಿ ಅನುಷ್ಠಾನಗೊಳಿಸಲಾಗುತ್ತಿರುವ ತಿಡಗುಂದಿ ಶಾಖಾ  ಕಾಲುವೆ ಕಿ.ಮಿ 56 ರ ವರೆಗೆ ಬರುವ ಒಟ್ಟು ಅಚ್ಚುಕಟ್ಟು ಕ್ಷೇತ್ರ 25572 ಹೇಕ್ಟರ್ ಪೈಕಿ ಇಂಡಿ ತಾಲೂಕಿನ 7898 ಹೇಕ್ಟರ್ ಕ್ಷೇತ್ರ ನೀರಾವರಿಗೆ ಒಳಪಡಲಿದೆ. ತಿಡಗುಂದಿ ಶಾಖಾ ಕಾಲುವೆ ಕಿ.ಮಿ 56 ರಿಂದ 65  ರ ವರೆಗೆ ಪೈಪಲೈನ್ ಮುಖಾಂತರ ಕಾಲುವೆ ಜಾಲವನ್ನು ಅಳವಡಿಸಿ ಇಂಡಿ ತಾಲೂಕಿನಡಿ ಸುಮಾರು 14500 ಹೇ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದ್ದು ಈಗಾಗಲೇ  ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಗುತ್ತಿಗೆ ವಹಿಸಿದ್ದು ಪ್ರಗತಿಯಲ್ಲಿದೆ. 

ಸರಕಾರವು ಇಂಡಿ ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 2019-20 ರ ಅಯವ್ಯಯ ಭಾಷಣದಲ್ಲಿ ರೂ 250 ಕೋಟಿ  ವೆಚ್ಚದಲ್ಲಿ ಇಂಡಿ ಹಾಗೂ ನಾಗಠಾಣ  ಮತಕ್ಷೇತ್ರ ವ್ಯಾಪ್ತಿಯ 28000 ಹೇ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಹೋರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಕೈಗೊತ್ತಿಕೊಳ್ಳಲು ಘೋಷಿಸಿದೆ. 

ತಿಡಗುಂದಿ ಶಾಖಾ ಕಾಲುವೆಯ ವಿಸ್ತರಣೆಯಿಂದ ಇಂಡಿ ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ತಾಂತ್ರಿಕವಾಗಿ ಸಾಧ್ಯವಾಗದೆ ಇರುವದರಿಂದ ಪರಾ​‍್ಯಯವಾಗಿ ಆಲಮಟ್ಟಿ ಜಲಾಶಯದ ಹಿನ್ಮನೀರಿನಿಂದ ಪ್ರತ್ಯೇಕವಾಗಿ 3.245 ಟಿ.ಎಂ.ಸಿ ನೀರನ್ನು ಲಿಫ್ಟ್‌ ಮಾಡಿ ಇಂಡಿ ತಾಲೂಕಿನ ಸುಮಾರು 28000 ಹೆ, ಪ್ರದೇಶಕ್ಕೆ  ನೀರಾವರಿ ಸೌಲಭ್ಯ ಕಲ್ಪಿಸಲು ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿದೆ ಎಂದು ಸಚಿವ ಗೊಂವಿದ ಕಾರಜೋಳರವರು  ಉತ್ತರಿಸಿದರು.  


ಸುದ್ದಿ ಓದಿ