ಧಾರವಾಡ - ಹುಬ್ಬಳ್ಳಿ

ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಹುಬ್ಬಳ್ಳಿ,22: ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿ ಆದೇಶ ಹಿಂಪಡೆದು, ಎರಡು ವರ್ಷಗಳಿಂದ ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಬೇಕು, ಹೊಸ ಕಾರ್ಡ್‌ ಮತ್ತು ನವೀಕರಣ ಮಾಡುವುದನ್ನು ಸರಳೀಕರಣಗೊಳಿಸಬೇಕು ಮತ್ತು ನೈಜ ಕಟ್ಟಡ ಕಾರ್ಮಿಕರಿಗೆ ಮಂಡಳಿಯ ಘೋಷಿತ ಸೌಲಭ್ಯಗಳನ್ನು ಖಾತ್ರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಎಐಯುಟಿಯುಸಿ ಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನೆಯ ಅಂಗವಾಗಿ ಇಂದು ಹುಬ್ಬಳ್ಳಿಯ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ನಿರಂತರವಾದ ಹೋರಾಟದ ಫಲವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದ್ದರೂ,ಇತ್ತೀಚಿನ ಬೆಳವಣಿಗೆಗಳಿಂದಾಗಿ ಮಂಡಳಿಯು ಕಾರ್ಮಿಕವಿರೋಧಿ ನೀತಿಗಳನ್ನು ಜಾರಿಗೆ ತಂದು  ಅಲ್ಲದೆ ಲ್ಯಾಪ್‌ಟಾಪ್, ಟ್ಯಾಬ್ ವಿದ್ಯಾಭ್ಯಾಸ,ಆರೋಗ್ಯ,ಮನೆ ಕಟ್ಟಲು ಇತ್ಯಾದಿಗಳಿಗೆ ಸಹಾಯಧನ ನೀಡದೇ, ಕೇವಲ ವಸ್ತುಗಳನ್ನು ನೀಡುವ ನೀತಿಯನ್ನು ಅನುಸರಿಸಿ 8000 ಕೋಟಿ ರೂಪಾಯಿಯಷ್ಟು ಭ್ರಷ್ಟಾಚಾರ ಮಾಡಿದೆ. ಕಿಟ್,ಟ್ಯಾಬ್,ಲ್ಯಾಪ್‌ಟಾಪ್‌ಗಳ ವಿತರಣೆಗೆ ಕಾರ್ಮಿಕ ಸಂಘಟನೆಗಳ ಆಕ್ಷೇಪ, ವಿರೋಧವಿದ್ದರೂ ಇತ್ತೀಚಿಗೆ ಇಮ್ಮ್ಯೂನಿಟಿ ಕಿಟ್ ಎಂಬ ಹೊಸ ಕಿಟ್ ಅನ್ನು ವಿತರಿಸುತ್ತಿದೆ. ಕಿಟ್‌ಗಳ ವಿತರಣೆಯಲ್ಲಿ ಇರುವ ಆಸಕ್ತಿ, ಪ್ರಸ್ತುತದ ಸ್ಕಾಲರ್ ಮೊತ್ತವನ್ನು ಹಿಂಪಡೆದು ಈ ಹಿಂದಿನ ಮೊತ್ತವನ್ನು ನೀಡುವಲ್ಲಿ ಇಲ್ಲದದ್ದು ಹಲವು ಅನುಮಾನಗಳಿಗೆ ಎಡೆ ಮಾಡುತ್ತದೆ.ಮಂಡಳಿಯ ಹಣ ಕಟ್ಟಡ ಕಾರ್ಮಿಕರದ್ದೇ ಹೊರತು ಸರ್ಕಾರದ್ದಲ್ಲ. ಆದ್ದರಿಂದ ಈ ಎಲ್ಲ ಕಟ್ಟಡ ಕಾರ್ಮಿಕ ವಿರೋಧಿ ನೀತಿಗಳ  ವಿರುದ್ಧ ಸಮಸ್ತ ಕಟ್ಟಡ ಕಾರ್ಮಿಕರು ಒಗ್ಗಟನ್ನು ಬಲಪಡಿಸಿಕೊಂಡು ಹೋರಾಟಕ್ಕೆ ಮುಂದಾಗಬೇಕೆಂದು ಹೇಳಿದರು. 

ಮುಂದುವರೆದು ಮಾತನಾಡಿದ ಅವರು, ಮಂಡಳಿ ಅಭಿವೃದ್ಧಿ ಪಡಿಸಿರುವ ಹೊಸ ತಂತ್ರಾಂಶವು ಸಹ ಹಲವಾರು ತಾಂತ್ರಿಕ ದೋಷಗಳಿಂದ ಕೂಡಿದೆ. ಕೇವಲ ಒಂದು ದಾಖಲೆ ಲಗತ್ತಿಸದ ಕಾರಣಕ್ಕಾಗಿ ಕಟ್ಟಡ ಕಾರ್ಮಿಕರೊಬ್ಬನು ಮಂಡಳಿಯ ಸದಸ್ಯತ್ವವೇ ರದ್ದಾಗುತ್ತಿದೆ. ಹೊಸ ತಂತ್ರಾಂಶ ವೃದ್ಧಿಸಿ ಎರಡು ವರ್ಷವಾದರೂ ಸಹ ಇಲ್ಲಿಯವರೆಗೂ ಸಮರ​‍್ಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತುರ್ತಾಗಿ ಹಣದ ಅವಶ್ಯಕತೆ ಇರುವ ಆರೋಗ್ಯದಂತಹ ಅರ್ಜಿ ಹಾಕುವುದರಲ್ಲಿ ಬಹಳ ವಿಳಂಬವಾಗುತ್ತಿದೆ. ಇನ್ನು ಮದುವೆ ಹಾಗೂ ಇನ್ನಿತರ ಸೌಲಭ್ಯಗಳಂತೂ ಕಾರ್ಮಿಕರು ಕಾದು ಕಾದು ಮಂಡಳಿಯ ಕಾರ್ಯ ವೈಖರಿಯಿಂದ ರೋಸಿ ಹೋಗಿದ್ದಾರೆ.  

ಜಿಲ್ಲಾ ಕಾರ್ಯದರ್ಶಿ ಯೋಗಪ್ಪ ಜೊತೆಪ್ಪನವರ್ ಮಾತನಾಡಿ, ರಾಜ್ಯ ಮಟ್ಟದ ಹಲವು ಸಭೆಗಳಲ್ಲಿ ತಂತ್ರಾಂಶದ ಕುರಿತಾದ ದೋಷಗಳು, ಕಾರ್ಮಿಕರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಮಂಡಿಸಿದಾಗ ಈಡೇರಿಸುವ ಭರವಸೆಯೊಂದಿಗೆ ದಿನಗಳನ್ನು ದೂಡಲಾಗುತ್ತಿದೆಯೇ ಹೊರತು ಸಮರ​‍್ಕವಾಗಿ ಕಾರ್ಯರೂಪಕ್ಕೆ ಬಾರದಿರುವುದಕ್ಕೆ ನಮ್ಮ ಸಂಘವು ಅತ್ಯುಗ್ರವಾಗಿ ಖಂಡಿಸುತ್ತಾ, ತಂತ್ರಾಂಶವನ್ನು ಸರಳೀಕರಣಗೊಳಿಸಿ, ನೈಜ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯ ಸೌಲಭ್ಯ ಒದಗಿಸಬೇಕು, ಬಾಕಿ ಇರುವ ಎಲ್ಲಾ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಮುಬಾರಕ್ ದರೋಗಾ,ಮಹ್ಮದ್ ಗೌಸ್ ಕುಸುಗಲ್,ರಫೀಕ್ ಗಂಜಿಗಟ್ಟಿ, ಅಶೋಕ ಭೈರಿಕೊಪ್ಪ,ನೀಲಪ್ಪ ಕುರಲಗೇರಿ,ಮಲ್ಲಿಕಾರ್ಜುನ ಜಾಲಿಕಟ್ಟಿ,ಸಂಜು ವಾಲೀಕಾರ,ಮಂಜು ದಾಸನಕೊಪ್ಪ,ಬಸವರಾಜ ಕರಿಗಾರ ಇನ್ನೂ ಮುಂತಾದವರು ಭಾಗವಹಿಸಿದ್ದರು. 

ನಂತರ ಮನವಿ ಪತ್ರವನ್ನು ಮಾನ್ಯ ಕಾರ್ಮಿಕ ಸಚಿವರಿಗೆ,ಕಲ್ಯಾಣ ಮಂಡಳಿಯ ಸಿಇಓರವರಿಗೆ ಸಹಾಯಕ ಕಾರ್ಮಿಕ ಆಯುಕ್ತರ ಪರವಾಗಿ ಕಾರ್ಮಿಕ ಅಧಿಕಾರಿಗಳಾದ ಮಾರಿಕಾಂಬಾರವರಿಗೆ ನೀಡಲಾಯಿತು. 


ಸುದ್ದಿ ಓದಿ