ಪಾಶ್ಚಾತ್ಯ ಸಾಹಿತ್ಯದಿಂದ ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಗಳ ಉದಯ
ಲೋಕದರ್ಶನ ವರದಿ
ಧಾರವಾಡ : ಕನ್ನಡ ನವೋದಯ ಕಾವ್ಯ ಸಮೃದ್ಧವಾಗಲು ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಸಾಕಷ್ಟಿದೆ. ಇಂಗ್ಲೀಷ ಸಾಹಿತ್ಯದಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ಅಸ್ತಿತ್ವದ ಮೇಲೆ ಹೊಸ ಸಂವೇದನೆಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲೀಷ ಹಿರಿಯ ಪ್ರಾಧ್ಯಾಪಕ ಡಾ. ಬಸವರಾಜ ಡೋಣೂರ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ವ್ಯಾಕರಣತೀರ್ಥ ಪಂ. ಚಂದ್ರಶೇಖರ ಶಾಸ್ತ್ರಿಗಳ ದತ್ತಿ ಅಂಗವಾಗಿ ದಿನಾಂಕ 24ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕನ್ನಡ ನವೋದಯ ಕಾವ್ಯದ ಮೇಲೆ ಇಂಗ್ಲೀಷ ಕಾವ್ಯದ ಪ್ರಭಾವ’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಕನ್ನಡ ಸಂಸ್ಕೃತಿ ಪರಂಪರೆ ಬೆಳೆಸಬೇಕು.
ಹೊಸ ಆಸೆ, ಹೊಸ ಕನಸು ಇಂಗ್ಲೀಷ ಗೀತಗಳಿಂದ ಬಂದರೂ ಆಧುನಿಕ ಪರಂಪರೆಯಲ್ಲಿ ಬಿ.ಎಂ.ಶ್ರೀ, ಸಕ್ರಿ ಬಾಳಾಚಾರ್ಯರಿಂದ ಹಿಡಿದು ಕುವೆಂಪು, ಲಂಕೇಶ, ಡಿ.ಆರ್.ನಾಗರಾಜ, ಕೀರ್ತಿನಾಥ ಕುರ್ತಕೋಟಿ, ಚಂಪಾ, ಗಿರಡ್ಡಿ ಗೋವಿಂದರಾಜವರೆಗೂ ಪಂಪ, ರನ್ನ, ಪೊನ್ನ, ಲಕ್ಷ್ಮೀಶರನ್ನು ಮರೆಯದೆ ಹೊಸ ಪರಂಪರೆಗೆ ಹೊಸ ವಿಚಾರಗಳನ್ನು ಕಟ್ಟಿಕೊಟ್ಟ ಆಧುನಿಕ ಪರಿಕಲ್ಪನೆಯೊಂದಿಗೆ ಸಂಸ್ಕೃತಿ, ಸಮುದಾಯ ನಿಷ್ಟೆ, ವಸ್ತುನಿಷ್ಟೆ ಮುಂದುವರೆಸಿಕೊಂಡು ಬಂದಿದ್ದಾರೆ. ಕಾವ್ಯ ಜನಸಾಮಾನ್ಯರ ಸಂವೇದನೆ, ಭಾಷೆ ಆಗಬೇಕು ಎಂದರು.
ಕ.ವಿ.ವ.ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನವೋದಯ ಸಾಹಿತ್ಯವು ಬಹುತೇಕ ಎಲ್ಲ ಕವಿಗಳು, ಸಾಹಿತಿಗಳು ಕಾವ್ಯಕ್ಕೆ ಮೀಸಲಿರಿಸಿಕೊಂಡು ನಾಟಕ, ಕಾದಂಬರಿ, ಸಣ್ಣಕಥೆಗಳು, ಪ್ರಬಂಧಗಳು ಶ್ರೀಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರುವ ಹಾಗೆ ಬೆಳೆದು ಬಂದಿದೆ.
ಪ್ರಗತೀಶೀಲ ಪರಂಪರೆಯು ಇಂದಿನವರೆಗೂ ಕನ್ನಡ ನಾಡು, ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಅನೇಕ ಕವಿವರ್ಯರ ಕೊಡುಗೆ ಅಪಾರವಾಗಿದೆ ಎಂದರು.
ಶಂಕರ ಕುಂಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ ಹಾಗೂ ಡಾ. ಲಿಂಗರಾಜ ಅಂಗಡಿ, ಪ್ರೊ. ಬಿ.ಎಸ್. ಶಿರೋಳ, ಪ್ರೊ. ಪೊಲೀಸ್ ಪಾಟೀಲ, ಸುರೇಶ ಹಿರೇಮಠ, ಎಂ.ಎಸ್. ನರೇಗಲ್ಲ, ಅರ್. ಡಿ. ಗೆದ್ದೆಣ್ಣವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.