ಹಾವೇರಿ

ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್ ಪಾರ್ಕ್‌ ಸ್ಥಾಪನೆ ಉದ್ದೇಶ ಜವಳಿ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ- ಜವಳಿ ಕೇತ್ರದಲ್ಲಿ ಕರ್ನಾಟಕ ರಾಜ್ಯ 6ನೇ ಸ್ಥಾನದಲ್ಲಿದೆ -ಸಚಿವ ರುದ್ರ​‍್ಪ ಲಮಾಣಿ

ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್ ಪಾರ್ಕ್‌ ಸ್ಥಾಪನೆ ಉದ್ದೇಶ   ಜವಳಿ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ- ಜವಳಿ ಕೇತ್ರದಲ್ಲಿ ಕರ್ನಾಟಕ ರಾಜ್ಯ 6ನೇ ಸ್ಥಾನದಲ್ಲಿದೆ   -ಸಚಿವ ರುದ್ರ​‍್ಪ ಲಮಾಣಿ
Proposal to establish a textile park spanning 100 acres in the district. Significant employment op

           ಹಾವೇರಿ 23:   ಕೃಷಿ ಕ್ಷೇತ್ರದ ನಂತರ ಅತಿ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವ ಕ್ಷೇತ್ರ ಜವಳಿ ಉದ್ಯಮವಾಗಿದೆ. ಹಾಗಾಗಿ ಜವಳಿ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಜವಳಿ, ಸಕ್ಕರೆ ಹಾಗೂ  ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರ​‍್ಪ ಲಮಾಣಿ ಹೇಳಿದರು. 

              ನಗರದ ಜಿ.ಎಚ್‌. ಕಾಲೇಜ್ ಸಭಾಂಗಣದಲ್ಲಿ ಸೋಮವಾರ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಕಾಲೇಜಿನ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ಜರುಗಿದ ‘ಜಾಗತಿಕ ಮಾರುಕಟ್ಟೆಗೆ ಜವಳಿ’ ಜವಳಿ ಉತ್ಪನ್ನಗಳ ರಫ್ತು ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

               ಕೈಮಗ್ಗ ಮತ್ತು ಜವಳಿ ಉದ್ಯಮ ದೇಶದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ಜವಳಿ ಉದ್ಯಮಕ್ಕೆ ಮಹತ್ವದ ಸ್ಥಾನವಿದೆ. ಹಿಂದೆ ಬೇರೆ ದೇಶಗಳಿಂದ ಬಟ್ಟೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಆಮದು ಪ್ರಮಾಣ ಕಡಿಮೆಯಾಗಿದ್ದು, ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಜವಳಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

              ಜವಳಿ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಆರನೇ ಸ್ಥಾನದಲ್ಲಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಜಾಗತಿಕ ಮಾರುಕಟ್ಟೆಯ ಬೇಡಿಕೆ, ಉತ್ಪನ್ನಗಳ ಗುಣಮಟ್ಟ, ವಿನ್ಯಾಸ ಹಾಗೂ ರಫ್ತು ಪ್ರಕ್ರಿಯೆಗಳ ಬಗ್ಗೆ ನೇಕಾರರು ಮತ್ತು ಉದ್ಯಮಿಗಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.

                ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ ಎಂದರು. 

ಆಧುನಿಕತೆಯಿಂದ ನೇಕರರ ಸಂಖ್ಯೆ ಕ್ಷೀಣಿಸುತ್ತಿದೆ, ನೇಕಾರರ ಇಂದಿನ ಪರಿಸ್ಥಿತಿ ಗಂಭೀರವಾಗಿರುವುದು ಸರ್ಕಾರದ ಗಮನದಲ್ಲಿದೆ. ನೇಕಾರರ ಆರ್ಥಿಕ ಸ್ಥಿತಿ ಸುಧಾರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ವಿವಿಧ ಸಬ್ಸಿಡಿ ಹಾಗೂ ರಿಯಾಯಿತಿ ಯೋಜನೆಗಳನ್ನು ಜಾರಿಗೊಳಿಸಿದೆ.

             ವೈಜ್ಞಾನಿಕವಾಗಿ ವೇಗವಾಗಿ ಬೆಳೆಯುತ್ತಿರುವ ಜಗತ್ತಿನೊಂದಿಗೆ ನಾವೂ ಹೆಜ್ಜೆ ಹಾಕಬೇಕಿದೆ.  ಜವಳಿ ನೀತಿಯ ಕುರಿತು ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಶೀಘ್ರದಲ್ಲಿಯೇ ವಿಧಾನಸೌಧದಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸುವ ಚಿಂತನೆಯೂ ಇದೆ ಎಂದು ಹೇಳಿದರು.  

100 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್ ಪಾರ್ಕ್‌: ಹಾವೇರಿ ಜಿಲ್ಲೆಯಲ್ಲಿ ಜವಳಿ ಉದ್ಯಮದ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ.

             ಈ ಹಿಂದೆ ಹನುಮನಮಟ್ಟಿಯಲ್ಲಿ 16 ಎಕರೆ ಜಾಗ ಗುರುತಿಸಲಾಗಿತ್ತು. ಇದೀಗ ತುಮ್ಮಿನಕಟ್ಟಿಯಲ್ಲಿ 16 ಎಕರೆ ಜಾಗ ಗುರುತಿಸಿ ಜವಳಿ ಉದ್ಯಮಕ್ಕೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಕೇಂದ ಸರ್ಕಾರದ ಶೇ.60  ಹಾಗೂ  ರಾಜ್ಯ ಸರ್ಕಾರ ಶೇ.40ರ ಸಹಭಾಗಿತ್ವದಲ್ಲಿ ಎರಡೂ ಕಡೆಗಳಲ್ಲಿಯೂ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು. 

               ನನ್ನ ಅವಧಿಯಲ್ಲಿ ಜಿಲ್ಲೆಯಲ್ಲಿ ಜವಳಿ ಇಲಾಖೆಯ ಅಡಿಯಲ್ಲಿ 100 ಎಕರೆ ವಿಸ್ತೀರ್ಣದಲ್ಲಿ ಟೆಕ್ಸ್‌ಟೈಲ್ ಪಾರ್ಕ್‌ ಸ್ಥಾಪಿಸುವ ಗುರಿ ಹೊಂದಿದ್ದೇನೆ.  ಕೋಳೂರ-ಗಣಜೂರು  ಕೈಗಾರಿಕಾ ಪ್ರದೇಶದಲ್ಲಿ 407 ಎಕರೆ ಅಭಿವೃದ್ಧಿ ಪಡಿಸಲಾಗುತ್ತಿದೆ.  ಈ ಪ್ರದೇಶದಲ್ಲಿ 100 ಎಕರೆ ಟೆಕ್ಸ್‌ಟೈಲ್‌ಗೆ ಕಾಯ್ದಿರಿಸಲಾಗಿದೆ.  ಯಾರಾದರೂ ಜವಳಿ ಉದ್ಯಮ ಸ್ಥಾಪನೆಗೆ ಮುಂದೆ ಬಂದರೆ ಜಾಗ ನೀಡಲಾಗುವುದು ಎಂದರು. 

             ಕಳೆದ ಬಜೆಟ್‌ನಲ್ಲಿ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಜವಳಿ ಪಾರ್ಕ್‌ ಸ್ಥಾಪನೆ ಕುರಿತು ಘೋಷಣೆಯಾಗಿದೆ. ತುಮ್ಮಿನಕಟ್ಟಿಯಲ್ಲಿ ತಯಾರಾಗುವ ದೇವರ ವಸ್ತ್ರ ಹಾಗೂ ನೀರು ಪಂಚೆಗಳಿಗೆ ಬಹಳ ಬೇಡಿಕೆಯಿದ್ದು, ಇವುಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು.  ಶೀಘ್ರದಲ್ಲಿ  ಶಿಗ್ಗಾವಿ ಟೆಕ್ಸ್‌ಟೈಲ್ ಪಾರ್ಕ್‌ಗೆ ನಾನು ಹಾಗೂ ಅಲ್ಲಿನ ಸ್ಥಳೀಯ ಶಾಸಕರು ಭೇಟಿ ನೀಡಿ,  ಅಲ್ಲಿನ ವ್ಯವಸ್ಥೆ ಕುರಿತು ಪರೀಶೀಲನೆ ನಡೆಸಲಾಗುವುದು ಎಂದರು. 

              ಜಿಲ್ಲೆಯಲ್ಲಿ 600 ಕೈಮಗ್ಗಗಳು ಹಾಗೂ 500ಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳು  ಹಾಗೂ 15 ಸಿದ್ದ ಉಡುಪು ಘಟಕಗಳು ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿ. ಅಂದಾಜು ಆರು ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆತಿದೆ.

             ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಹತ್ತಿ ಉತ್ಪಾದನೆಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಜವಳಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಜಿಐ ಟ್ಯಾಗ್ ಹಾಗೂ ಜಾಗತಿಕ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಹೇಳಿದರು. 

                ನೇಕಾರರು ತಯಾರಿಸುವ ಜವಳಿ ಉತ್ಪನ್ನಗಳನ್ನು ಶಾಲಾ ಮಕ್ಕಳಿಗೆ ವಿತರಣೆಗೆ ಚಿಂತನೆ ಮಾಡಲಾಗಿದೆ. ನೇಕಾರರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದ್ದು, ಮುಖ್ಯಮಂತ್ರಿ ಅವರೂ ಈ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಶೀಘ್ರದಲ್ಲಿಯೇ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

            ಧಾರವಾಡ ಕೇಂದ್ರೀಯ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ. ವಿರಾಜ್ ಸೋಮ್ಕುವರ್ ಹಾಗೂ ಹಾವೇರಿ ಅಂಚೆ ಅಧೀಕ್ಷಕ ಮಂಜುನಾಥ ಹುಬ್ಬಳ್ಳಿ ಅವರು ಜಾಗತಿಕ ಮಾರುಕಟ್ಟೆಗೆ ಜವಳಿ ಉತ್ಪನ್ನಗಳ ರಫ್ತು ಕುರಿತು ವಿವಿಧ ವಿಷಯಗಳ ಸವಿವರಾದ ಉಪನ್ಯಾಸ ನೀಡಿದರು. 

               ಕಾರ್ಯಕ್ರಮದಲ್ಲಿ  ಪ್ರಾಧಿಕಾರ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಬೆಳಗಾವಿ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಡಾ. ಶಿವರಾಜ ಕುಲಕರ್ಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಶೋಕ ಪ್ಯಾಟಿ,  ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಕರಿಗಾರ,

             ಸಂಜೀವಕುಮಾರ ನೀರಲಗಿ, ಲಕ್ಷ್ಮಣ ತಳವಾರ, ಪ್ರಾಂಶುಪಾಲ ಸಿದ್ದೇಶ ಎಂ.ಬಿ., ಜಿ.ವಿ. ಹಿತೇಗೌಡ್ರ, ಸಿದ್ದಪ್ಪ, ನಾರಾಯಣಪ್ಪ ಗಡ್ಡದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಭೋಜರಾಜ ಕಠಾರಿ ಸ್ವಾಗತಿಸಿದರು. ನಾಗವೇಣಿ ನಿರೂಪಿಸಿದರು. 


ಸುದ್ದಿ ಓದಿ