ರಾಣೆಬೆನ್ನೂರ

ರಾಜಕಾರಣ ವೃತ್ತಿಯಲ್ಲ ಸೇವಾ ಕ್ಷೇತ್ರ :ಶಾಸಕ ಕೋಳಿವಾಡ

ರಾಜಕಾರಣ ವೃತ್ತಿಯಲ್ಲ ಸೇವಾ ಕ್ಷೇತ್ರ :ಶಾಸಕ ಕೋಳಿವಾಡ

 ರಾಣೆಬೆನ್ನೂರ 2:  ರಾಜಕಾರಣವನ್ನು ಯಾರೂ ಸಹ ವೃತ್ತಿ ಎಂದು ಭಾವಿಸಬಾರದು, ಅದೊಂದು ಸೇವಾ ಕೇಂದ್ರ ಎಂದು ಭಾವಿಸಿ ಪ್ರಾಮಾಣಿಕ ಹಾಗೂ ನಿಷ್ಕಲ್ಮಶ ಭಾವನೆಯಿಂದ ಶ್ರೀಸಾಮಾನ್ಯರ ಸೇವೆಯನ್ನು ಮಾಡಲು ಮುಂದಾಗಬೇಕು, ಇದಕ್ಕೆ ಅಧಿಕಾರಿಗಳ ಸಹಕಾರ ಬೇಕಾಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ಅವರು ಬುಧವಾರ ಇಲ್ಲಿನ ತಾಲೂಕ ಪಂಚಾಯತಿಯ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಜಕಾರಣ ಮಾಡುವವರು ಲಾಭಕ್ಕಾಗಿ ಉದ್ಯಮಿಯನ್ನಾಗಿ ಈ ರಂಗವನ್ನು ಪ್ರವೇಶಿಸಬಾರದು. ಜನಸಾಮಾನ್ಯರ ಸೇವೆಗೆ ಸಿದ್ದರಾಗಿ ಈ ಕ್ಷೇತ್ರಕ್ಕೆ ಬರಬೇಕು, ಅಂದಾಗ ಮಾತ್ರ ಕ್ಷೇತ್ರದ ಪ್ರಗತಿ ಸಾಧ್ಯ ಎಂದರು. ನಾನು ಸಹ ಉದ್ಯಮಿದಾರ ಹಾಗೂ ಕೃಷಿಕ. ಸಾಮಾಜಿಕ ಕಳಕಳಿ ಹೊಂದಿರುವ ಸಮಾಜ ಸೇವಕನಾಗಿದ್ದೇನೆ.

ಈ ರಾಜಕಾರಣವನ್ನು ಸಮಾಜ ಸೇವೆಗೆ ನಾನು ಬಳಸಿಕೊಳ್ಳುವೆ. ಸರ್ಕಾರದ ಸೌಲಭ್ಯಗಳನ್ನು ಶ್ರೀಸಾಮಾನ್ಯರಿಗೆ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಸಿಬ್ಬಂದಿಗಳು ಮಾಡಬೇಕು ಎಂದರು. ತಮ್ಮ ಕೆಲಸಗಳಿಗಾಗಿ ಇಲಾಖೆಗಳಿಗೆ ಬರುವ ರೈತರು, ಬಡವರು, ಶ್ರೀಸಾಮಾನ್ಯರು ಸೇರಿದಂತೆ ಇತರರನ್ನು ಗೌರವದಿಂದ ಕಾಣಬೇಕು, ಅವರುಗಳ ಸಮಸ್ಯೆಗಳನ್ನು ಶಾಂತ ರೀತಿಯಿಂದ ಆಲಿಸಿ ಪರಿಹಾರ ಕಲ್ಪಿಸಿ ಕೊಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು. ಶಾಸಕರಾದವರು ಏನೇ ಯೋಜನೆ ಜಾರಿಗೆ ತಂದರೂ ಸಹ ಅದರ ಅನುಷ್ಠಾನ, ಯಶಸ್ಸು ಅಧಿಕಾರಿಗಳ ಮೇಲೆ ಇದೆ. ಅಧಿಕಾರಿಗಳು ಸ್ಪಂದಿಸಿ ಸಹಕಾರ ನೀಡಿದರೆ ಈ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಮಹಾದಾಸೆ ನನ್ನದಾಗಿದೆ ಎಂದು ಕೋಳಿವಾಡ ಹೇಳಿದರು. ಇದಕ್ಕೂ ಮೊದಲು ವಿವಿಧ ಇಲಾಖೆಗಳ ಅಧಿಕಾರಿಗಳ ಪರಿಚಯದ ಜೊತೆಗೆ ಅವರುಗಳ ಇಲಾಖೆಯ ಪ್ರಗತಿಯನ್ನು ಶಾಸಕರು ಪರಿಶೀಲಿಸಿದರು. ಆನಂತರ ಎಲ್ಲ ಇಲಾಖೆಗಳ ಪರವಾಗಿ ತಾಪಂನಿಂದ ಶಾಸಕ ಕೋಳಿವಾಡರಿಗೆ ಸನ್ಮಾನಿಸಿ ಗೌರವಿಸಲಾಯಿತು. ತಾಪಂ ಇಓ ಎಸ್ .ಪಿ ಸುಮಲತಾ, ತಹಶೀಲ್ದಾರ್ ಕೆ ಗುರು ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ನಗರಸಭೆ ಪೌರಾಯುಕ್ತ ಎನ್ಎಚ್.ಕುಮ್ಮಣ್ಣನವರ ಸೇರಿದಂತೆ ಮತ್ತಿತರರು ಇದ್ದರು.

ಸುದ್ದಿ ಓದಿ