ಬೈಲಹೊಂಗಲ

ಜಮೀನು ಪರಭಾರೆಯನ್ನು ಹಕ್ಕು ಪತ್ರದೊಂದಿಗೆ ಸಕ್ರಮಗೊಳಿಸಲು ಒತ್ತಾಯಿಸಿ ಮನವಿ

ಜಮೀನು ಪರಭಾರೆಯನ್ನು ಹಕ್ಕು ಪತ್ರದೊಂದಿಗೆ ಸಕ್ರಮಗೊಳಿಸಲು ಒತ್ತಾಯಿಸಿ ಮನವಿ

ಬೈಲಹೊಂಗಲ 30: 'ಕಿತ್ತೂರು ತಾಲೂಕಿನ ವ್ಯಾಪ್ತಿಯಲ್ಲಿರುವ ಕುಲವಳ್ಳಿ ಗ್ರಾಮದ ಇನಾಮ ಜಮೀನುಗಳಿಗೆ ಸಂಬಂಧಿಸಿದಂತೆ ಭೂ ನ್ಯಾಯ ಮಂಡಳಿ ಕಿತ್ತೂರು ನ್ಯಾಯಾಲಯದಲ್ಲಿ ಕೆಎಲ್ಆರ್, ಟಿ.ಆರ್.ಬಿ., ಡಿ.ಈ.ಸಿ. 380, 383, 384, 385 ಕೂಡಲೇ ಇತ್ಯರ್ಥಸಿ ಉಳುಮೆ ಮಾಡುತ್ತಿರುವ 8 ಹಳ್ಳಿಗಳ ರೈತರ ಜಮೀನಿನ ಅಕ್ರಮ ಪರಭಾರೆಯನ್ನು ಹಕ್ಕು ಪತ್ರದೊಂದಿಗೆ ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿ ನೇಗಿಲ ಯೋಗಿ ರೈತ ಸಂಘದಿಂದ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ರಾಜ್ಯ ಘಟಕ ಅಧ್ಯಕ್ಷ ರವಿ ಪಾಟೀಲ ಮಾತನಾಡಿ ಕುಲವಳ್ಳಿ, ಸಾಗರ, ಕತ್ರಿದಡ್ಡಿ, ದಿಂಡಲಕೊಪ್ಪ, ಗಂಗ್ಯಾನಟ್ಟಿ, ಮಾಚಿ, ಗಲಗಿನಮಡ, ನಿಂಗಾನೂರ ಗ್ರಾಮಗಳ ಸುಮಾರು 6500 ಎಕರೆ ಜಮೀನು ರೈತರು ಕಬ್ಜಾ ಪರಭಾರೆಯಲ್ಲಿದೆ. ಈ ಜಮೀನಿನ ಪರಭಾರೆಯನ್ನು ಸುಮಾರು 80 ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಜಮೀನಿನ ಮೇಲೆ ಅವಲಂಬಿತರಾಗಿದ್ದು, ತಮ್ಮ ಜೀವನವನ್ನು ಸಾಗಿಸುತ್ತಾ ಬಂದಿದ್ದಾರೆ. ಈ ಭಾಗದ ರೈತರು ಸರ್ಕಾರಿ ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ, ಗ್ರಾಮ ಪಂಚಾಯಿತಿ, ವಿದ್ಯುತ್ ಸೌಲಭ್ಯ, ಬಸ್ಸು, ಚುನಾವಣೆ ಗುರುತಿನ ಚೀಟಿ, ಆಧಾರ ಕಾರ್ಡ್, ಪಡಿತರ ಚೀಟಿ ಹೊಂದಿದ್ದಾರೆ. ಈ ಗ್ರಾಮಗಳಲ್ಲಿ ಒಟ್ಟು ಏಳು ಸಾವಿರ ಜನ ಸಂಖ್ಯೆ ಇದೆ. ಈ ಗ್ರಾಮಗಳ ರೈತರ ಕಬ್ಜಾದಲ್ಲಿರುವ ಭೂಮಿಯನ್ನು ಉಳುಮೆ ಮಾಡುತ್ತಿದ್ದರೂ ಅವರ ಜಮೀನುಗಳು ಮಾತ್ರ ಹೆಸರಿಗೆ ಪಹಣೆ ಆಗದೆ ಇರುವುದು ವಿಪರ್ಯಾಸವಾಗಿದೆ ಎಂದರು.

    ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ಮೊಕಾಶಿ ಮಾತನಾಡಿ ಭೂಸುಧಾರಣೆ ಕಾಯ್ದೆ ಪ್ರಕಾರ ಕುಲವಳ್ಳಿ ವ್ಯಾಪ್ತಿಯ ಎಲ್ಲ ಇನಾಮಿ ಜಮೀನುಗಳ ವಿಚಾರಣೆ ನಡೆಸಿ ಹೆಚ್ಚುವರಿ ಭೂಮಿ ಎಂದು ಘೋಷಣೆ ಮಾಡಿ ರೈತರು ಸಾಗುವಳಿ ಮಾಡಿದ ಭೂಮಿಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು. 

      ರೈತರಾದ ಸುರೇಶ ವಾಲಿ, ಗಿರಿಮಲ್ಲ ನಾಯ್ಕರ, ಶಿವಮಾರುತಿ ಬೆಂದ್ರಾಳ್ಳಿ, ವೆಂಕಟೇಶ ಸೊಂಟಕ್ಕಿ, ಅನೇಕರು ಇದ್ದರು 

ಸುದ್ದಿ ಓದಿ