ಸಂವಿಧಾನ ಭಾರತದ ಪ್ರಜಾಪ್ರಭುತ್ವದ ಬುನಾದಿ: ನ್ಯಾಯವಾದಿ ಕಸ್ತೂರಿ
ತಾಳಿಕೋಟಿ 27 : ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ, ನಮ್ಮ ಸಂವಿಧಾನ ಇದರ ಬುನಾದಿಯಾಗಿದೆ ಎಂದು ಮಾತೋಶ್ರೀ ಕಾನೂನು ಮಹಾವಿದ್ಯಾಲಯದ ಪ್ರೊಫೆಸರ್ ಗಂಗಾಧರ ಕಸ್ತೂರಿ ಹೇಳಿದರು.
ಗುರುವಾರ ಪಟ್ಟಣದ ಮಾತೋಶ್ರೀ ಕರ್ಜಗಿ ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕಾಲೇಜಿನ ಅಧ್ಯಕ್ಷರಾದ ಡಾ. ಎಂ.ಎಸ್. ಕರ್ಜಗಿ ಅವರು ಮಾತನಾಡಿ ದೇಶದ ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸಂವಿಧಾನದಲ್ಲಿ ಎಲ್ಲ ನಾಗರೀಕರಿಗೆ ಅವರ ಹಕ್ಕುಗಳನ್ನು ನೀಡಿ ಪ್ರತಿಯೊಬ್ಬರ ಕರ್ತವ್ಯಗಳನ್ನು ತಿಳಿಸಿಕೊಡಲಾಗಿದೆ ಎಂದರು.
ಪ್ರೋ.ಬಸವರಾಜ ಹೊಸಮನಿ ಕಲಂ 42 ಕುರಿತು ಮಾತನಾಡಿ ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಅನುಸರಣೆ ಮಾಡುವುದು ಅಗತ್ಯವಾಗಿದೆ, ಅದರ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಇದು ಅತ್ಯಗತ್ಯವಾಗಿದೆ ಎಂದರು. ಹೆಚ್. ಜಿ.ನಾಗೋಡ ಸಂವಿಧಾನದ ಧ್ಯೆಯೋದ್ದೇಶಗಳ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಕಾನೂನು ವಿದ್ಯಾರ್ಥಿ ಶೋಯಬ್ ಕಾಜಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರೇಮ ಮಾಳಗಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.