ಬೆಳಗಾವಿ

ಕನಕದಾಸರ ತತ್ವ, ಆದರ್ಶಗಳು ಇಂದಿನ ಯುವಪೀಳಿಗೆಗೆ ದಾರೀದೀಪ: ಶಾಸಕ ವಿಶ್ವಾಸ ವೈದ್ಯ

ಕನಕದಾಸರ ತತ್ವ, ಆದರ್ಶಗಳು ಇಂದಿನ ಯುವಪೀಳಿಗೆಗೆ ದಾರೀದೀಪ: ಶಾಸಕ ವಿಶ್ವಾಸ ವೈದ್ಯ
Kanakadasa’s principles and ideals serve as a guiding light for today’s younger generation: MLA Vish


                ಸವದತ್ತಿ  27: ಸಂತ ಶ್ರೇಷ್ಠ, ದಾರ್ಶನಿಕ ಕವಿ ಭಕ್ತ ಕನಕದಾಸರು ತಮ್ಮ ಅಮೂಲ್ಯ ಕೀರ್ತನೆಗಳು ಹಾಗೂ ಸಾಹಿತ್ಯದ ಮೂಲಕ ಸಮಾಜದಲ್ಲಿದ್ದ ಅಸಮಾನತೆ ಮತ್ತು ಜಾತಿ-ಮತಗಳ ಭೇದವನ್ನು ಹೋಗಲಾಡಿಸಿ, ನಾವೆಲ್ಲರೂ ಒಂದೇ ಎಂಬ ವಿಶ್ವಮಾನವ ಸಂದೇಶವನ್ನು ಸಾರಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಅಭಿಪ್ರಾಯಪಟ್ಟರು.ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಸವದತ್ತಿ ಯಲ್ಲಮ್ಮ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಭಕ್ತ ಕನಕದಾಸರ 539ನೇ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

            ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾನ್ ದಾರ್ಶನಿಕ ಕನಕದಾಸರ ಆದರ್ಶಗಳು, ತತ್ವ-ಸಿದ್ಧಾಂತಗಳು ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳು ಇಂದಿನ ಯುವ ಪೀಳಿಗೆಗೆ ಸದಾ ದಾರೀದೀಪವಾಗಿವೆ. ಕನಕದಾಸರ ಸ್ಮರಣೆ ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ, ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸೌಹಾರ್ದತೆಯಿಂದ ಸಮಾಜದ ಸರ್ವತೋಮುಖ ಏಳಿಗೆಗೆ ಶ್ರಮಿಸೋಣ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಪಂ ಇಒ ಆನಂದ ಬಡಕುಂದ್ರಿ, ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ;

                ಅವರು ಇಡೀ ಮನುಕುಲಕ್ಕೆ ದಾರೀದೀಪವಾದ ಮಹಾನ್ ಸಂತರು. ಬಾಡ ಗ್ರಾಮದ ತಿಮ್ಮಪ್ಪ ನಾಯಕರಾಗಿ ಜನಿಸಿ, ಯುದ್ಧಭೂಮಿಯ ವೈರಾಗ್ಯದ ನಂತರ ಭಕ್ತಿ ಮಾರ್ಗಕ್ಕೆ ತಿರುಗಿ ಕನಕದಾಸರಾದ ಅವರ ಜೀವನವೇ ಒಂದು ದೊಡ್ಡ ಪಾಠ. ವ್ಯಾಸರಾಯರ ಶಿಷ್ಯರಾಗಿ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅವರು, ’ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಕೀರ್ತನೆಯ ಮೂಲಕ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದರು ಎಂದು ಸ್ಮರಿಸಿದರು.ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಜಿ.ವಿ. ಜೀವಾಪೂರ ಅವರು ಕನಕದಾಸರ ಜೀವನ ಚರಿತ್ರೆ, ಸಾಮಾಜಿಕ ಕೊಡುಗೆ ಹಾಗೂ ದಾಸ ಸಾಹಿತ್ಯದ ಮಹತ್ವದ ಕುರಿತು ಸವಿಸ್ತಾರವಾಗಿ ವಿಶೇಷ ಉಪನ್ಯಾಸ ನೀಡಿದರು.

                  ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಎನ್‌. ಮಠದ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಪಿಎಸ್‌ಐ ಲಕ್ಷ್ಮಣ ಗೌಡಿ, ಅಬಕಾರಿ ಇಲಾಖೆ ದಾವಲ ಶಿಂಧೋಗಿ, ಆರ್‌.ಆರ್‌. ಕುಲಕರ್ಣಿ, ಸಿಡಿಪಿಒ ಅಮೃತ ಸಾಣಿಕೊಪ್ಪ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಜಿ.ಜಿ. ಕಣವಿ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಮಡಿವಾಳಪ್ಪ ಬಿದರಗಡ್ಡಿ, ಎಫ್‌.ವೈ.ಗಾಜಿ, ಚಂದ್ರು ಶ್ಯಾಮರಾಯನವರ, ಪ್ರವೀಣ್ ರಾಮಪ್ಪನವರ, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಕುರುಬ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ