ವಿದ್ಯುತ್ ದರ ಏರಿಕೆ, ಕನಿಷ್ಟ ಶುಲ್ಕ ಹೆಚ್ಚಳವಾಗಿರುವುದನ್ನು ಖಂಡಿಸಿ ಮನವಿ
ಬೈಲಹೊಂಗಲ 17: ವಿದ್ಯುತ್ ದರ ಏರಿಕೆ, ಕನಿಷ್ಟ ಶುಲ್ಕ ಹೆಚ್ಚಳವಾಗಿರುವುದನ್ನು ಖಂಡಿಸಿ, ಉತ್ತರ ಕರ್ನಾಟಕ ವೃತ್ತಿಪರ ನೇಕಾರ ಹೋರಾಟ ಸಮಿತಿ ದೇಶನೂರ ನೇತೃತ್ವದಲ್ಲಿ, ಗ್ರಾಮದ ನೂರಾರು ನೇಕಾರರು ಹೆಸ್ಕಾಂ ಕಚೇರಿ ಅಧಿಕಾರಿ, ತಹಸೀಲ್ದಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ದೇಶನೂರ ಗ್ರಾಮದಿಂದ ಹೆಸ್ಕಾಂ ಕಚೇರಿಗೆ ಬಂದ ನೇಕಾರರು ವಿದ್ಯುತ್ ದರ ಏರಿಕೆಯಿಂದ ತಮಗಾಗುತ್ತಿರುವ ತೊಂದರೆಯನ್ನು ಹೆಸ್ಕಾಂ ಕಚೇರಿ ಸಿಬ್ಬಂದಿ ಎದುರು ತೋಡಿಕೊಂಡರು. ಗ್ರಾಮದಲ್ಲಿರುವ ನೇಕಾರರು ನೇಕಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕನಿಷ್ಟ ಶುಲ್ಕ ಹೆಚ್ಚಳವಾಗಿರುವುದರಿಂದ ನೇಕಾರಿಕೆಗೆ ತೀವ್ರ ಅಡಚಣೆ ಉಂಟಾಗುತ್ತಿದೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ನೇಕಾರ ಮುಖಂಡರಾದ ಸಂತೋಷ ತಿಳಗಂಜಿ, ಪ್ರಶಾಂತ ಚಡಿಚಾಳ ಮಾತನಾಡಿ, ರಾಜ್ಯ ಸರಕಾರ ವಿದ್ಯುತ್ ದರವನ್ನು ಏಕಾಏಕಿ ಏರಿಸಿದ್ದರ ಪರಿಣಾಮ ನೇಕಾರರಿಗೆ ಆರ್ಥಿಕವಾಗಿ ತುಂಬಾ ಹೊರೆಯಾಗುತ್ತಿದೆ. ಈ ಹಿಂದೆ ನೇಕಾರರಿಗೆ ರೂಪಿಸಿದ ವಿಶೇಷ ಯೋಜನೆಯಲ್ಲಿ ರೂ.1.25 ಪೈ ಯಂತೆ ವಿದ್ಯುತ್ ದರ ಆಕರಣೆ ಆಗಬೇಕು, ಕನಿಷ್ಟ ಶುಲ್ಕ ಮತ್ತು ಎಪ್.ಎ.ಸಿ ಶುಲ್ಕ ರದ್ದುಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುಣಾವಣಾ ಪೂರ್ವ ಪ್ರಚಾರ ಸಭೆಯಲ್ಲಿ ನೇಕಾರರಿಗೆ 10 ಹೆಚ್.ಪಿ ವಿದ್ಯುತ್ ಉಚಿತ ಘೋಷಣೆ ಮಾಡಿದ್ದು, ಇದನ್ನು ತಕ್ಷಣ ಜಾರಿಗೊಳಿಸಬೇಕು ಅಲ್ಲದೇ ಗೃಹಬಳಕೆ ವಿದ್ಯುತ್ ದರ ಗಗನಕ್ಕೇರಿದ್ದು ಕೂಡಲೇ ಕಡಿಮೆ ಮಾಡಬೇಕು, ಸರಕಾರ ನಮ್ಮ ಬೇಡಿಕೆ ಈಡೇರಿಸುವರೆಗೆ ನಾವು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಪಾವತಿಸುವುದಿಲ್ಲ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ನೇಕಾರರು ರಾಜ್ಯಾದಂತ ಒಗ್ಗಟ್ಟಾಗಿ ಉಗ್ರ ಹೋರಾಟ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆ ಹುಸಿಗೊಳಿಸಿ, ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದೆ. ಚುನಾವಣೆಯಲ್ಲಿ ನೀಡಿದ ಉಚಿತ ಭರವಸೆಗಳಿಗೆ ದಿನಕ್ಕೊಂದು ನಿಯಮ ತಂದು ಅನ್ಯಾಯ ಎಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹೆಸ್ಕಾಂ ಇಲಾಖೆ ಅಧಿಕಾರಿ ತಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು.
ಮುಸ್ತಾಪ ಅಥಣಿ, ನೀಲಕಂಠ ಸೊಗಲಿ, ಸುಂದರ ಮಿರಜಕರ, ರಸೀದ ಗಂಡಪಲ್ಲಿ, ಗಣಿ ಚವ್ಹಾಣ, ಗೋಪಾಲ ತಿಳಗಂಜಿ, ಪ್ರಕಾಶ ಹೊಂಗಲ, ರಾಮಚಂದ್ರ ಮಜ್ಜಗಿ, ಬಸವಂತ ಚಡಿಚಾಳ, ಲಾಡಖಾನ ಅಥಣಿ, ಬಸವರಾಜ ಹೊನ್ನಿಹಾಳ, ಲಾಡಕಾ ಅಥಣಿ, ಖಲೀಲ ಅಥಣಿ, ಸಿದ್ದಾರೂಢ ಗಡ್ಡಿ, ಕಲ್ಲಪ್ಪ ತಿಳಗಂಜಿ, ಮಂಜುನಾಥ ಗಡ್ಡಿ, ಬಸವರಾಜ ಜೈನರ, ವಿಶ್ವನಾಥ ನರೇಂದ್ರ, ಮಂಜುನಾಥ ನರೇಂದ್ರ, ಗಣಪತಿ ಮಾಸ್ತಮರಡಿ, ಯಾಕೂಬ್ ಗಡಪಲ್ಲಿ ಸೇರಿದಂತೆ ಸುಮಾರು 600 ಕ್ಕೂ ಹೆಚ್ಚು ನೇಕಾರರು ಭಾಗವಹಿಸಿದ್ದರು.