ಇಂಡಿ

ವಿಕೇಂಡ್ ಕರ್ಫ್ಯೂಗೆ ಜನತೆ ಸ್ಪಂದನೆ

ವಿಕೇಂಡ್ ಕರ್ಫ್ಯೂಗೆ ಜನತೆ ಸ್ಪಂದನೆ

ಇಂಡಿ09:  ಕೊರೊನಾ ನಿಯಂತ್ರಣಕ್ಕೆ ಸರಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂಗೆ ಎರಡನೆಯ ದಿನವಾದ ರವಿವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಸ್ಪಂದಿಸಿದ್ದಾರೆ. 

ಎರಡು ದಿನಗಳಲ್ಲಿ ಬಸ್ ಸಂಚಾರ ಕಡಿಮೆಯಾಗಿ 20 ಲಕ್ಷ ರೂ ಹಾನಿಯಾಗಿದೆ. ಬಸ್ ಸಂಚಾರ ವಿರಳವಾಗಿತ್ತು. ಬಸ್ ನಿಲ್ದಾಣದಲ್ಲಿ ಜನರೂ ಅಷ್ಟಾಗಿ ಬರಲಿಲ್ಲ. ಪ್ರಯಾಣಿಕರ ಸಂಖ್ಯೆ ನೋಡಿ ಬಸ್ ಗಳ ಕಾರ್ಯಾಚರಣೆ ನಡೆಸಲಾಯಿತು. 97 ಬಸ್ ಗಳಲ್ಲಿ 26 ಬಸ್ಸುಗಳ ಕಾರ್ಯಾಚರಣೆ ನಡೆಸಿದ್ದು ಜನರಿಲ್ಲದೇ ಇರುವ ಕಾರಣ ಹಾನಿಯಾಗಿದೆ. 

ಆಟೋಚಾಲಕರ ಗೋಳು: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಕಷ್ಟಗೊಳಗಾದ ಅಟೋ ಚಾಲಕರು ಪ್ರಯಾಣಿಕರಿಲ್ಲದೆ ಪರದಾಡಿದರು. ಪ್ರತಿದಿನ 800 ರಿಂದ ಸಾವಿರ ರೂ ಗಳಿಸುವ ಚಾಲಕರು ನೂರು ರೂಪಾಯಿಗೂ ಪರದಾಡಬೇಕಾಯಿತು. 

ಹೂವಿನ ಅಂಗಡಿ: ಹೂವಿನ ಅಂಗಡಿಯವರು ವಿಜಯಪುರ ಮತ್ತಿತರ ಕಡೆಯಿಂದ ಬಸ್ ನಿಲ್ದಾಣ ಹತ್ತಿರ ಇರುವವರು 5000 ರೂ ಹೂವು ತರಿಸಿದ್ದರು. ಯಾವದೇ ವ್ಯಾಪಾರವಿಲ್ಲದೆ ತುಂಬ ನಷ್ಟ ಅನುಭವಿಸಬೇಕಾಯಿತು.ಎರಡು ದಿನದಲ್ಲಿ ಹೂಗಳು ಬಾಡುವ ನಿಮಿತ್ಯ ಮಾರಲು ಬರದ ಪರಿಸ್ಥಿತಿ ಇತ್ತು. 

ಪುರಸಭೆಯಿಂದ ಜಾಗೃತಿ: ಓಮಿಕ್ರಾನ, ಕೊರೊನಾ ಸೋಂಕಿನ ಆತಂಕದ ಹಿನ್ನೆಯಲ್ಲಿ ಸಾರ್ವಜನಿಕದಲ್ಲಿ ಜಾಗೃತಿ ಮೂಡಿಸಿದರು. ಪುರಸಭೆಯಿಂದ ಮೈಕ ಮೂಲಕ ಜಾಗೃತಿ ಮೂಡಿಸಲಾಯಿತು. 

ಯುವಕರಿಗೆ ಖಾಕಿ ಪಾಠ: ಕರ್ಫ್ಯೂ ಹಿನ್ನೆಲೆಯಲ್ಲಿ ಮಾಸ್ಕ ಧರಿಸದಿದ್ದವರಿಗೆ ಪೋಲಿಸರು ದಂಡ ವಿಧಿಸಿದರು. ಬಳಿಕ ಎಚ್ಚರಿಕೆ ನೀಡಿ ಕಳುಹಿಸಿದರು. ಜತೆಗೆ ಅನವಶ್ಯಕವಾಗಿ ಹೊರಗಡೆ ಬಂದವರಿಗೆ ಕ್ಲಾಸ್ ತೆಗೆದುಕೊಂಡ ಖಾಕಿ ಪಡೆ ರೋಗ ಅಂಟಿಸಿಕೊಂಡು ಮನೆಯ ಮಂದಿಗೆ ತೊಂದರೆ ಕೊಡುತ್ತೀರಿ ಎಂದು ಬುದ್ದಿವಾದ ಹೇಳುತ್ತಿರುವುದು ಕಂಡು ಬಂತು. 

ಚೆಕ್ ಪೋಸ್ಟ: ತಾಲೂಕಿನ ಮೂರು ಚೆಕ್ ಪೋಸ್ಟಗಳಲ್ಲಿ ಆರೋಗ್ಯ ಇಲಾಖೆ, ಪೋಲಿಸ್‌ ಇಲಾಖೆ, ಗೃಹ ರಕ್ಷಕ ದಳದವರಿಂದ ತಪಾಸಣೆ ಚುರುಕುಗೊಳಿಸಲಾಗಿತ್ತು. 

ಪಟ್ಟಣದಲ್ಲಿ ಬಹುತೇಕ ಮುಚ್ಚಿದ ಮಳಿಗೆಗಳು ಮತ್ತು ಅಗತ್ಯ ಸೇವೆಗಳಿಗೆ ಅಡ್ಡಿ ಇರಲಿಲ್ಲ. ಸಾರ್ವಜನಿಕರು ವಿಕೇಂಡ್ ಕರ್ಫ್ಯೂಗೆ ಸ್ಪಂದಿಸಿ ಹೊರ ಬರಲಿಲ್ಲ. 

ಸುದ್ದಿ ಓದಿ