ಧಾರವಾಡ - ಹುಬ್ಬಳ್ಳಿ

ಕ್ರೀಡಾಪಟುಗಳಿಗೆ ತಾಳ್ಮೆ, ದೈಹಿಕ ಸಾಮರ್ಥ್ಯ, ಪರಿಶ್ರಮ ಬಹಳ ಮುಖ್ಯ: ಕೆ.ಪಿ.ಸುರೇಶ್

ಕ್ರೀಡಾಪಟುಗಳಿಗೆ ತಾಳ್ಮೆ, ದೈಹಿಕ ಸಾಮರ್ಥ್ಯ, ಪರಿಶ್ರಮ ಬಹಳ ಮುಖ್ಯ: ಕೆ.ಪಿ.ಸುರೇಶ್

ಧಾರವಾಡ 10: ಕ್ರೀಡಾ ಪಟುಗಳು ಕ್ರೀಡೆಯನ್ನು ಸೌಹಾರ್ದಯುತವಾಗಿ ಆಡಬೇಕು. ಕ್ರೀಡಾಪಟುಗಳಿಗೆ ತಾಳ್ಮೆ, ದೈಹಿಕ ಸಾಮರ್ಥ್ಯ, ಪರಿಶ್ರಮ ಬಹಳ ಮುಖ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಪಿ.ಸುರೇಶ್ ಅಭಿಪ್ರಾಯಪಟ್ಟರು. 

ಅವರು ನಗರದ ಕರ್ನಾಟಕ ಕಲಾ ಕಾಲೇಜಿನ ಫುಟ್‌ಬಾಲ್ ಮೈದಾನದಲ್ಲಿ ಆಯೋಜಿಸಿದ 2024-25ನೇ ಸಾಲಿನ ತಾಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ಫುಟ್‌ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  

ಜಗತ್ತಿನಲ್ಲಿ ಫುಟ್‌ಬಾಲ್‌ಗೆ ಅಮೆರಿಕ, ಯುರೋಪ್ ಇಂತಹ ದೇಶಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆ. ಆದರೆ ಭಾರತದಲ್ಲಿ ಕ್ರಿಕೆಟ್,ಕಬಡ್ಡಿ ಈ ಕ್ರೀಡೆಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಈ ನಿಟ್ಟಿನಲ್ಲಿ ಫುಟ್ಬಾಲ್ ಕೂಡ ಬೆಳೆಯಬೇಕು. ಕ್ರೀಡಾ ಪಟುಗಳು ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಸೇವನೆ ಯಂತಹ ದುಶ್ಚಟಗಳಿಗೆ ಒಳಗಾಗದೆ, ನಿಮ್ಮ ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಬೇಕು ಎಂದರು.  

ತಾಲೂಕು ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಜಿಲ್ಲಾ ಮಟ್ಟಕ್ಕೆ ಕರೆದೊಯ್ಯುವ ಜವಾಬ್ದಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಭರಿಸುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಅವರು ಪಿಯುಸಿ ಹಂತದಲ್ಲಿಯೇ ಕ್ರೀಡೆಯನ್ನು ಬೆಳೆಸುವ ಏಕೈಕ ಸಂಸ್ಥೆ ಎಂದರೆ ಅದು ಕರ್ನಾಟಕ ಕಾಲೇಜು ಎಂದರು. 

ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ರಾಬರ್ಟ್‌ ದದ್ದಾಪುರಿ ಅವರು ಮಾತನಾಡಿ ಕರ್ನಾಟಕ ಕಾಲೇಜು ಪಠ್ಯ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಪ್ರೊತ್ಸಾಹ ನೀಡುತ್ತಿದೆ ಎಂದ ಅವರು ಕ್ರೀಡೆಯಿಂದ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದರು. 

ಕರ್ನಾಟಕ ಮಹಾವಿದ್ಯಾಲಯದ ಜಿಮಖಾನದ ಉಪಾಧ್ಯಕ್ಷ ಡಾ.ಐ.ಸಿ.ಮುಳಗುಂದ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. 

ಫುಟ್ ಬಾಲ್ ಇದು ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಏಕೈಕ ಕ್ರೀಡೆ. ಇದು ಸುಮಾರು 200 ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಮುಂಬರುವ ದಿನಗಳಲ್ಲಿ ಹುಡುಗಿಯರು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಅಭಿಪ್ರಾಯ ಪಟ್ಟರು. 

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಿ.ಬಿ.ಕರಡೋಣಿ ಮಾತನಾಡಿ ಧಾರವಾಡದಲ್ಲಿ ಫುಟ್‌ಬಾಲ್ ಕ್ರೀಡೆಗೆ ಕರ್ನಾಟಕ ಕಾಲೇಜಿನ ಮೈದಾನ ಜನಪ್ರಿಯವಾಗಿದೆ. ಒಂದೇ ಕ್ರೀಡೆಯ ಮೂಲಕ ವಿದ್ಯಾರ್ಥಿಗಳು ದೈಹಿಕ ಮಾನಸಿಕವಾಗಿ ಸದೃಢವಾಗಿಸಿಕೊಳ್ಳಬೇಕು ಎಂದರು. 

ಅಕ್ಯಾಡೆಮಿಕ್ ಡೀನರಾದ ಡಾ. ಎಂ.ಕೆ.ವಿ.ಲಮಾಣಿ, ದೈಹಿಕ ನಿರ್ದೇಶಕರಾದ ಡಾ. ಮಂಜುನಾಥ, ಅಸುಂಡಿ, ಫುಟ್ ಬಾಲ್ ವಿಭಾಗದ ಚೇರಮನ್ನ ಡಾ.ಎಂ.ಬಿ.ದಳಪತಿ, ಡಾ. ಎಂ.ಆರ್‌.ಹಿರೇಮಠ್, ಡಾ. ಎಸ್‌.ಜಿ. ಮಳ್ಳಿಮಠ ಸೇರಿದಂತೆ ವಿದ್ಯಾರ್ಥಿಗಳು ಇತರರು ಇದ್ದರು. 


ಸುದ್ದಿ ಓದಿ