ಪಾರ್ಥನಹಳ್ಳಿ ಗ್ರಾಪಂಗೆ ರಾಜಶ್ರೀ ಅಧ್ಯಕ್ಷ, ನಿಂಗಪ್ಪ ಉಪಾಧ್ಯಕ್ಷ
ವೆಂಕಟೇಶ ದೇಶಪಾಂಡೆ
ಅಥಣಿ. 12: ಕಾಗವಾಡ ಮತಕ್ಷೇತ್ರದ ಪಾರ್ಥನಹಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಜಶ್ರೀ ಮಾಣಿಕ ಜಾಧವ ಹಾಗೂ ಉಪಾಧ್ಯಕ್ಷರಾಗಿ ನಿಂಗಪ್ಪ ಕರೆಪ್ಪ ಸನದಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಜಶ್ರೀ ಮಾಣಿಕ ಜಾಧವ ಹಾಗೂ ಮಂಗಲ ಸಂಭಾಜಿ ಪಾಟೀಲ ನಾಮ ಪತ್ರ ಸಲ್ಲಿಸಿ ಸ್ಪರ್ಧಿಸಿದರು. ಚುನಾವಣೆಯಲ್ಲಿ ಒಟ್ಟು 19 ಸದಸ್ಯರ ಪೈಕಿ 11 ಸದಸ್ಯರು ರಾಜಶ್ರೀ ಜಾಧವ ಪರವಾಗಿ ಹಾಗೂ 8ನ ಸದಸ್ಯರು ಮಂಗಲ ಪಾಟೀಲ ಪರ ಮತ ಚಲಾಯಿಸಿದ ಪರಿಣಾಮ 2 ಮತಗಳ ಅಂತರದಿಂದ ರಾಜಶ್ರೀ ಜಾಧವ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ನಿಂಗಪ್ಪ ಕರೆಪ್ಪ ಸನದಿ ಒಬ್ಬರೆ ನಾಮಪತ್ರ ಸಲ್ಲಿಸಿದ ಪರಿಣಾಮ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ಜಾಧವ ಎಲ್ಲ ಸದಸ್ಯರ ಬೆಂಬಲದೊಂದಿಗೆ ಪಾರ್ಥನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಪಾರ್ಥನಹಳ್ಳಿ, ಮಾಯನಟ್ಟಿ, ಅಗ್ರಹಾರಿಣಿ ಇಂಗಳಗಾಂವ ಹಾಗೂ ಅಬ್ಬಿಹಾಳ ಗ್ರಾಮಗಳಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸುವೆ ಎಂದ ಅವರು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನನ್ನ ಪರವಾಗಿ ಮತ ಚಲಾಯಿಸಿದ ಎಲ್ಲ ಸದಸ್ಯರಿಗೆ ಕೃತಜ್ಷತೆ ಸಲ್ಲಿಸಿದರು.
ಕಾಗವಾಡ ಮತಕ್ಷೇತ್ರದ ಬಿಜೆಪಿ ಮುಖಂಡ ಭಾವುಸಾಹೇಬ ಜಾಧವ ಮಾತನಾಡಿ, ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಹಾಗೂ ಬಿಜೆಪಿ ಯುವ ನಾಯಕ ಶ್ರೀನಿವಾಸ ಪಾಟೀಲ ಇವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಶ್ರೀಮಂತ ಪಾಟೀಲರು ಕಾಗವಾಡ ಮತಕ್ಷೇತ್ರದ ಎಲ್ಲ ತೋಟ ಪಟ್ಟಿಯ ರಸ್ತೆಗಳನ್ನು ಅಭಿವೃದ್ಧಿ ಪಡೆಸಿದ್ದಾರೆ ಇದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಅನಕೂಲವಾಗಿದೆ ಎಂದರು.
ಈ ಜನಪರ ಕಾರ್ಯಗಳನ್ನು ಮೆಚ್ಚಿ ಪಾರ್ಥನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಬ್ಬಿಹಾಳ, ಮಾಯನಟ್ಟಿ, ಅಗ್ರಹಾರಿಣಿ ಇಂಗಳಗಾಂವ ಗ್ರಾಮದ ಪಂಚಾಯತ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂದ ಅವರು ನೂತನ ಅಧ್ಯಕ್ಷೆ ರಾಜಶ್ರೀ ಮಾಣಿಕ ಜಾಧವ ಹಾಗೂ ನಿಂಗಪ್ಪ ಕರೆಪ್ಪ ಸನದಿ ನೇತೃತ್ವದಲ್ಲಿ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ ಎಂದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯ ಅಧಿಕಾರಿಯಾಗಿ ಪಂಚಾಯತ ರಾಜ ಇಲಾಖೆಯ ವೀರಣ್ಣಾ ವಾಲಿ ಕಾರ್ಯನಿರ್ವಹಿಸಿದರು. ಚುನಾವಣಾ ಕಾರ್ಯ ನಡೆದಿರುವಾಗ ತಹಶೀಲ್ದಾರ ಸುರೇಶ ಮುಂಜೆ ಗ್ರಾಮ ಪಂಚಾಯತ ಕಛೇರಿಗೆ ಭೇಟಿ ನೀಡಿ ಪರೀಶೀಲಿಸಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಸುರೇಶ ದೊಡ್ಡಮನಿ ಚುನಾವಣಾಧಿಕಾರಿಗಳ ಜೊತೆ ಕಾರ್ಯನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆ ನಂತರ ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲ ಎರೆಚಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಧುರೀಣರಾದ ಸಿದರಾಯ ತೇಲಿ, ಅಪ್ಪಣ್ಣ ಮುಜಗಣ್ಣವರ, ಶಿವಾನಂದ ಮುಜಗಣ್ಣವರ, ಮಹಾದೇವ ಜಾಧವ, ರಮೇಶ ಬಡಿಗೇರ, ಲಕ್ಷ್ಮಣ ಮದಣ್ಣವರ, ಶಂಕರ ಮುಜಗಣ್ಣವರ, ಪರಗೊಂಡಾ ಮಗದುಮ್, ಅಮಗೊಂಡಾ ಮದಣ್ಣವರ, ಸದಾಶಿವ ನಾಯಿಕ, ರಾವಸಾಹೇಬ ಬಿರಾದಾರ, ಸದಾಶಿವ ಮಗದುಮ್, ಧನಪಾಲ ಕಾಂಬಳೆ, ಸದಾಶಿವ ಕುಳ್ಳೊಳ್ಳಿ, ಪಿಂಟು ಮಗದುಮ್, ಬಸವರಾಜ ನಾವಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.