ನೆಹರು ಜಯಂತಿ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಅರಿವು ಮೂಡಿಸಲು ಕರೆ
ಲೋಕದರ್ಶನ ವರದಿ
ಸಿಂದಗಿ 17: ಸ್ವಾತಂತ್ರ್ಯಾನಂತರ ಭಾರತದಲ್ಲಿ ಅಸ್ಪೃಶ್ಯತೆ, ನಿರುದ್ಯೋಗ ಹಾಗೂ ಹಿಂದುಳಿದ ಸಾಮಾಜಿಕ ಪರಿಸ್ಥಿತಿಗಳನ್ನು ಹೋಗಲಾಡಿಸಿ, ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಪಂಡಿತ ಜವಾಹರಲಾಲ ನೆಹರು ಅವರ ಬಲಿಷ್ಠ ನೀತಿಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ಪತ್ರಿಕಾ ಅಂಕಣಕಾರ ಪ್ರೊ. ಪ್ರಶಾಂತ ಕುಲಕರ್ಣಿ ಹೇಳಿದರು.
ಪಟ್ಟಣದ ನಾಗೂರ ಬಡಾವಣೆಯ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿಧೋದ್ದೇಶಗಳ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ, ಪಂಡಿತ ಜವಾಹರಲಾಲ ನೆಹರು ಜಯಂತ್ಯುತ್ಸವ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿ, ನೆಹರು ಅವರು 17 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವಂತೆ ಮಾಡಿದರು. ಇಂದಿನ ಮಕ್ಕಳು ಉತ್ತಮ ಸಂಸ್ಕಾರಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು. ಪೋಷಕರು ಮಕ್ಕಳಿಗೆ ಹಣ ನೀಡುವುದರ ಜೊತೆಗೆ ಅದರ ಮೌಲ್ಯ ಹಾಗೂ ಆರ್ಥಿಕ ಶಿಸ್ತಿನ ಮಹತ್ವವನ್ನೂ ತಿಳಿಸಿಕೊಡಬೇಕು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್.ಡಿ. ಕುಲಕರ್ಣಿ, ಮಕ್ಕಳು ಕೇವಲ ವಿದ್ಯಾರ್ಥಿಗಳಾಗದೆ ದೇಶದ ಸದೃಢ ಪ್ರಜೆಗಳಾಗಿ ರೂಪುಗೊಳ್ಳಬೇಕು.
ನೆಹರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನು ವಿಶ್ವದ ಶ್ರೇಷ್ಠ ರಾಷ್ಟ್ರಗಳ ಸಾಲಿನಲ್ಲಿ ಮುನ್ನಡೆಸುವ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಜೀವನ ಮೌಲ್ಯಗಳನ್ನು ಸಾರುವ ರೈತ, ವೈದ್ಯ, ವಕೀಲ, ಹೂವಾಡಗಿತ್ತಿ, ಇಂಜಿನಿಯರ್, ಬುಡುಬುಡಿಕೆ ಸೇರಿದಂತೆ ವಿವಿಧ ವೇಷಭೂಷಣಗಳ ಛದ್ಮವೇಷ ಪ್ರದರ್ಶನ ನಡೆಯಿತು.
ದಕ್ಷಿಣ ಕರ್ನಾಟಕದ ಕಾಂತಾರ ವಿಶೇಷ ಏಕಪಾತ್ರಾಭಿನಯವೂ ಪಾಲಕರ ಮೆಚ್ಚುಗೆಗೆ ಪಾತ್ರವಾಯಿತು. ಸಂಸ್ಥೆಯ ನಿರ್ದೇಶಕ ಪಿ.ಡಿ. ಕುಲಕರ್ಣಿ ಹಾಗೂ ಮುಖ್ಯೋಪಾಧ್ಯಾಯಿನಿ ಎಂ.ಪಿ. ಬುಕ್ಕಾ ಉಪಸ್ಥಿತರಿದ್ದರು. ಕುಮಾರಿ ಆದ್ಯಾ ಗೊಬ್ಬೂರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸತೀಶ ಕುಲಕರ್ಣಿ ಸ್ವಾಗತಿಸಿದರು. ಜಿ.ಎಸ್. ಯಂಕಂಚಿ ಹಾಗೂ ಸತೀಶ ಕುಲಕರ್ಣಿ ನಿರೂಪಿಸಿದರು. ಎಸ್.ಎಸ್. ಪಾಟೀಲ ವಂದಿಸಿದರು.