ಇಂಡಿ

ಜ.14ರಂದು ರಾಷ್ಟ್ರೀಯ ಬಸವ ಕೃಷಿ ಪ್ರಧಾನ ಸಮಾರಂಭ

ಜ.14ರಂದು ರಾಷ್ಟ್ರೀಯ ಬಸವ ಕೃಷಿ ಪ್ರಧಾನ ಸಮಾರಂಭ
ಪತ್ರಕಾಗೋಷ್ಠಿಯಲ್ಲಿ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿದರು.

ಇಂಡಿ31:  ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಜ.14 ಕ್ಕೆ ಒಂದು ವರ್ಷ ಪೂರೈಕೆಯಾದ ನೆನಪು ಮತ್ತು ಶೀಘ್ರವೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬಾಗಲಕೋಟ ಜಿಲ್ಲೆಯ ಕೂಡಲಸಂಗಮದಲ್ಲಿ ಜ.14 ರಂದು ರಾಷ್ಟ್ರೀಯ ಬಸವ ಕೃಷಿ ಪ್ರಧಾನ ಸಮಾರಂಭ, ಮೀಸಲಾತಿ ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು. 

ಅವರು ಶುಕ್ರವಾರ ಪಟ್ಟಣದ ಅಕ್ಕಮಹಾದೇವಿ ಸೌಹಾರ್ದ ಸಹಕಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಅಂದು ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ ಕಾರ್ಯಕ್ರಮ ನಡೆಯಲಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ನಿಲ್ಲಲ್ಲ. ರಾಜ್ಯ ಸರಕಾರ ನಮ್ಮ ಬೇಡಿಕೆಗೆ ಪ್ರಸ್ತುತ ಸ್ಪಂದಿಸುತ್ತಿದೆ. ಆದರೆ ಅದು ಕಾರ್ಯ ರೂಪಕ್ಕೆ ಬರಬೇಕು ಎಂದರು. 

ಅಂದು ನಡೆಯುವ ಸಮಾರಂಭಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಅವರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಂದು ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸುವ ವಿಶ್ವಾಸವಿದೆ ಎಂದರು. 

ಜ.14 ರಂದು ಅಖಂಡ ಕರ್ನಾಟಕದಿಂದ ಲಕ್ಷಾಂತರ ಜನ ಬರುವ ನೀರೀಕ್ಷೆ ಇದೆ. ವಿಜಯಪುರ ಬಾಗಲಕೋಟ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜನ ಹೆಚ್ಚಾಗಿ ಸೇರಲಿದ್ದಾರೆ ಎಂದರು. 

ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ವಿ.ಹೆಚ್‌.ಬಿರಾದಾರ ಮಾತನಾಡಿ ಜನೇವರಿ 14 ರಂದು ನಮ್ಮ ತಾಲೂಕಿನಿಂದ ಐದು ಸಾವಿರ ಜನ ಕೂಡಲಸಂಗಮಕ್ಕೆ ಹೋಗಬೇಕು. ಶೀಘ್ರವೇ ಸಮಾಜದ ತಾಲೂಕಾ ಸಭೆ ಕರೆದು ಚರ್ಚಿಸಲಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ತಾಲೂಕಿನ ಜನ ಭಾಗವಹಿಸುವ ವಿಶ್ವಾಸವಿದೆ ಎಂದರು. 

ಸಮಾಜದ ಜಿಲ್ಲಾ ಯುವಘಟಕದ ಅಧ್ಯಕ್ಷ ಸೋಮಶೇಖರ ದೇವರ, ಸುಧಾಕರಗೌಡ ಬಿರಾದಾರ, ಮಂಜುನಾಥ ಕಾಮಗೊಂಡ, ಶ್ರೀಶೈಲ ಮುಳಜಿ, ಶಿವಾನಂದ ಚಾಳಿಕಾರ, ಅಶೋಕ ಬಳಬಟ್ಟಿ, ಬಾಳು ಮುಳಜಿ ಮತ್ತಿತರರು ಇದ್ದರು. 

ಸುದ್ದಿ ಓದಿ