ಬೈಲಹೊಂಗಲ

ನೀಟ್, ಸಿಇಟಿ ತರಬೇತಿ ಕಾರ್ಯಕ್ರಮ

ನೀಟ್, ಸಿಇಟಿ ತರಬೇತಿ ಕಾರ್ಯಕ್ರಮ

ಬೈಲಹೊಂಗಲ: ಬಡ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕೆಂಬ ಉದ್ದೇಶದಿಂದ ಸರಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಮಂಡಳಿ ನೀಟ್, ಸಿಇಟಿ ತರಬೇತಿ ಆಯೋಜಿಸಿದ್ದನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು ಡಿವೈಎಸ್ಪಿ ರವಿ ನಾಯ್ಕ ಹೇಳಿದರು. 

ಅವರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಮಂಡಳಿ ಆಯೋಜಿಸಿದ ನೀಟ್, ಸಿಇಟಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಸಾಧನೆ ಸುಖಾ, ಸುಮ್ಮನೆ ಸಿಗುವುದಿಲ್ಲ. ಅತ್ಯಮೂಲ್ಯವಾದವಿದ್ಯಾರ್ಥಿ ಜೀವನದ ಸಮಯವನ್ನು ವ್ಯರ್ಥ ಮಾಡದೆ ಓದಿಗೆ  ಮೀಸಲಿಟ್ಟು ಶ್ರಮಪಟ್ಟರೆ  ಮುಂದಿನ ಜೀವನ ಸದಾ ಉಜ್ವಲವಾಗುವುದು. ಯಾವುದೇ ಸಮಸ್ಯೆ ಎದುರಾದರೂ ಎದೆಗುಂದದೆ ಓದಿನಲ್ಲಿ ಸತತ ಆಸಕ್ತಿ ಹೊಂದಿರಬೇಕು.

ಪಾಲಕರು ಮತ್ತು ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಬೇಕು. ತಂದೆ, ತಾಯಿಗಳ ಪರಿಶ್ರಮಕ್ಕೆ ಸ್ಪಂದಿಸಿ, ಬದುಕು ರೂಪಿಸಿಕೊಂಡು ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದರು.ಪಾಲಕರು ಮಕ್ಕಳು ಆಸಕ್ತಿ ಇರುವ ವಿಷಯದಲ್ಲಿ ಶಿಕ್ಷಣ ಪಡೆಯಲು ಅವರಿಗೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು. ನುರಿತ ಉಪನ್ಯಾಸಕರಿಂದ ತರಬೇತಿ ಆಯೋಜಿಸಲಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು. ಪುಸ್ತಕಗಳನ್ನು ಓದಬೇಕು. ಸಾಧಕರ ಸಾಧನೆ ಪ್ರೇರೆಪಿಸಿಕೊಂಡು ಗುರಿ ಸಾಧಿಸಬೇಕೆಂದರು. ಕಾಲೇಜಿನ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಅಶೋಕ ವಾಲಿ ಮಾತನಾಡಿ, ಶಾಸಕ ಮಹಾಂತೇಶ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಈ ಕೋಚಿಂಗ್ ಅಲ್ಲದೆ, ಪ್ರಸಿದ್ಧ ಪರಿಶ್ರಮ ಅಕಾಡೆಮಿ ವತಿಯಿಂದ ಆನ್ಲೈನ್ ಮೂಲಕ ಕಾಲೇಜಿನಲ್ಲಿ ಡಿಜಿಟಲ್ ಬೋರ್ಡ್ ಅಳವಡಿಸಿ, ತರಬೇತಿ ಕೂಡ ಕೊಡಲು ಯೋಜನೆ ರೂಪಿಸಲಾಗಿದೆ ಎಂದರು.ಪತ್ರಕರ್ತ ಬಸವರಾಜ ಕಲಾದಗಿ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಹೆಗ್ಗಳಿಕೆಯ ಈ ಕಾಲೇಜಿನಲ್ಲಿ ಎಲ್ಲ ಸ್ವಸಜಿತ ಸೌಕರ್ಯವಿದ್ದು, ವಿದ್ಯಾರ್ಥಿಗಳ ಸಾಧನೆಗೆ ಅನುಕೂಲವಾಗಿದೆ ಎಂದರು.ಕಾಲೇಜಿನ ಪ್ರಾಚಾರ್ಯ ಬಿ.ಎಫ್. ಕುರಿ, ಉಪನ್ಯಾಸಕರಾದ ಬಿ. ಎಂ. ಕೊಳವಿ, ಡಿ.ಸಿ. ಅಡಕಿ ಮಾತನಾಡಿ, ಕಳೆದ ಬಾರಿ ಪಿಯುಸಿ ಯಲ್ಲಿ ಕಲಾ ಭಾಗದ ಸಹನಾ ಕಡಕೋಳ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿದ್ದು, ಈ ಬಾರೀ 2 ರ್ಯಾಂಕ್ ಪಡೆಯುವ ಗುರಿ ಹೊಂದಿದ್ದೆವೆ.ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳನ್ನು ಪರೀಕ್ಷೆ ಮೂಲಕ ಆಯ್ಕೆ ಮಾಡಿ ನೀಟ್, ಸಿಇಟಿ ಕೋಚಿಂಗ್ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಒಳ್ಳೆಯ ತರಬೇತಿ ಪಡೆದು ಕಾಲೇಜಿಗೆ ಹಾಗೂ ಪಾಲಕರಿಗೆ ಹೆಸರು ತರಬೇಕೆಂದರು. ವಸತಿ ನಿಲಯ ಮೇಲ್ವಿಚಾರಕ ಲಕ್ಮಣ ಸದಲಗಿ ಮಾತನಾಡಿದರು. ಉಪನ್ಯಾಸಕ ಬಿ.ಜಿ. ಪುರಾಣಿಕಮಠ ಸ್ವಾಗತಿಸಿದರು. ಉಪನ್ಯಾಸಕ ಎಚ್.ಆರ್.ಪಾಟೀಲ, ಆರ್.ಬಿ. ಹುನಗುಂದ, ವಸತಿ ನಿಲಯ ಮೇಲ್ವಿಚಾರಕಿ ಲಕ್ಷ್ಮೀಬಾಯಿ ಲಮಾಣಿ, ಪಾಲಕರು, ವಿದ್ಯಾರ್ಥಿಗಳು ಇದ್ದರು.

ಸುದ್ದಿ ಓದಿ