ಇಂಡಿ

ಡಿ.18ರಂದು ಮೆಗಾ ಲೋಕ ಅದಾಲತ್ ಕಾರ್ಯಕ್ರಮ: ಬುದಾರಪುರ

ಡಿ.18ರಂದು ಮೆಗಾ ಲೋಕ ಅದಾಲತ್ ಕಾರ್ಯಕ್ರಮ: ಬುದಾರಪುರ


ಇಂಡಿ15:  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸ್ಥಳೀಯ ನ್ಯಾಯಾಲಯದಲ್ಲಿ ಡಿ. 18ರಂದು ಬೆಳಗ್ಗೆ 10:30 ರಿಂದ ಸಂಜೆ 5ರ ವರೆಗೆ ಮೆಗಾ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ಶ್ರೀನಿವಾಸ ಬುದಾರಪುರ  ಹೇಳಿದರು. 

ಬುಧವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜೀ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಮೆಗಾ ಲೋಕ ಅದಾಲತ ಆಯೋಜಿಸಲಾಗಿದೆ. 

ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ 1251 ಪ್ರಕರಣಗಳು ಇತ್ಯರ್ಥ ಗೊಂಡಿವೆ. ಮತ್ತು 22 ಲಕ್ಷ 76600. ರೂ ಬ್ಯಾಂಕು, ಪುರಸಭೆ, ಗ್ರಾ.ಪಂ ಕರವಸೂಲಾತಿ, ಫೈನಾನ್ಸ, ಬಡ್ಡಿ ವ್ಯವಹಾರ ಸೇರಿದಂತೆ ಇಲಾಖೆಗಳಿಗೆ ಸಂದಾಯವಾಗಬಹುದಾದ ಹಣ ಸಂದಾಯವಾಗಿದೆ ಎಂದರು. ಈ ಬಾರಿ ಅದಕ್ಕೂ ಹೆಚ್ಚು ಪ್ರಕರಣಗಳನ್ನು ರಾಜೀ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. 

ಈ ಅದಾಲತ್ ನಲ್ಲಿ ಹೊಲ, ಮನೆ, ಬ್ಯಾಂಕು, ಅಪಘಾತ, ಚೆಕ್ ಬೌನ್ಸ, ಜನನ, ಸಹಕಾರಿ, ಸಣ್ಣ ಪುಟ್ಟ ಗಲಾಟೆ, ಆರೋಪ ಸೇರಿದಂತೆ ಇನ್ನೀತರ ಪ್ರಕರಣಗಳನ್ನು ವಿಚಾರಣೆ ಮಾಡುವದರ ಮೂಲಕ ಅಂದೇ ಅಂತಿಮ ನಿರ್ಣಯದ ಮೂಲಕ ರಾಜೀ ಮಾಡಲಾಗುತ್ತದೆ ಎಂದು ಅವರು ಹೇಳಿದರು. 

ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಒಬ್ಬರು ಗೆಲ್ಲುತ್ತಾರೆ, ಮತ್ತೊಬ್ಬರಿಗೆ ಸೋಲಾಗುತ್ತದೆ. ಆದರೆ ಅದಾಲತನಲ್ಲಿ ಇಬ್ಬರಿಗೂ ತೃಪ್ತಿಯಾಗುವ ತೀರ್ಮಾನ ಮಾಡಲಾಗುತ್ತದೆ. ಲೋಕ್ ಅದಾಲತನಲ್ಲಿ ರಾಜೀಯಾದ ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ಇತ್ಯರ್ಥ್ಯ ಪಡಿಸಿಕೊಳ್ಳಲು ಅವಕಾಶವಿದೆ. 

ನೇರವಾಗಿಯೂ ಭಾಗವಹಿಸಬಹುದು. ಇಬ್ಬರಿಗೂ ತೃಪ್ತಿಯಾದರೆ ಮಾತ್ರ ಇತ್ಯರ್ಥ ಮಾಡುತ್ತೇವೆ. ಮತ್ತೆ ಮೇಲ್ಮನವಿಗೆ ಅವಕಾಶ ಇರುವದಿಲ್ಲ. ಕೌಟುಂಬಿಕ ಕಲಹಗಳನ್ನು ರಾಜೀ ಸಂಧನದ ಮೂಲಕ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವದು ಎಂದು ಬುದಾರಪುರ ಹೇಳಿದರು.    

ಕಿರಿಯ ಶ್ರೇಣಿ ನ್ಯಾಯಾಧೀಶ ಎ.ಎಚ್‌.ಖಣಗಾಂವಿ, ವಕೀಲರ ಸಂಘದ ಅಧ್ಯಕ್ಷ ಪಿ.ಬಿ.ಪಾಟೀಲ, ಕಾರ್ಯದರ್ಶಿ ಎಸ್‌.ಆರ್‌.ಬಿರಾದಾರ, ನ್ಯಾಯವಾದಿಗಳಾದ ಎಸ್‌.ಎಲ್‌.ಬಟಗಿ, ಪ್ರವೀಣ ಕಾಂಬಳೆ, ಝೆಡ್‌.ಬಿ,ಬಾಗವಾನ ಮತ್ತು ಸಿದ್ದು ಹಾವಳಗಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ