ಜಮಖಂಡಿ

ವೀರವನಿತೆ ಒನಕೆ ಓಬವ್ವನ ಧೈರ್ಯ, ಸಾಹಸ ಯುವಜನತೆಗೆ ಸ್ಫೂರ್ತಿಯಾಗಲಿ

ವೀರವನಿತೆ ಒನಕೆ ಓಬವ್ವನ ಧೈರ್ಯ, ಸಾಹಸ ಯುವಜನತೆಗೆ ಸ್ಫೂರ್ತಿಯಾಗಲಿ

ಲೋಕದರ್ಶನ ವರದಿ 

ಜಮಖಂಡಿ 12 : ವೀರ ವನಿತೆ ಒನಕೆ ಓಬವ್ವ ಅವರು ತಮ್ಮ ಜೀವದ ಹಂಗು ತೊರೆದು ಚಿತ್ರದುರ್ಗದ ಉಕ್ಕಿನ ಕೋಟೆಯನ್ನು ರಕ್ಷಿಸಿದ ಧೈರ್ಯ, ಸಾಹಸ ಮತ್ತು ದೇಶಪ್ರೇಮದ ಆದರ್ಶಗಳನ್ನು ಇಂದಿನ ಯುವಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶ ರಕ್ಷಣೆಗೆ ಮುಂದಾಗಬೇಕು ಎಂದು ಕೆ.ಶಿವರಾಂ ಸಂಘಟನೆ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಶಶಿಕಾಂತ ತೇರದಾಳ ಹೇಳಿದರು. 

ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಕೆ.ಶಿವರಾಂ ಅವರ ಸಂಘಟನೆಯಾದ ಛಲವಾದಿ ಮಹಾಸಭಾ ವತಿಯಿಂದ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. 

ಚಿತ್ರದುರ್ಗದ ಕೋಟೆಯೊಳಗೆ ಹೈದರಾಲಿಯ ಸೈನಿಕರು ಕಿಂಡಿಯ ಮೂಲಕ ನುಸುಳುತ್ತಿರುವುದನ್ನು ಗಮನಿಸಿದ ಒನಕೆ ಓಬವ್ವ ಅವರು ತಮ್ಮ ಕೈಯಲ್ಲಿದ್ದ ಒನಕೆಯಿಂದ ಶತ್ರು ಸೈನಿಕರನ್ನು ಎದುರಿಸಿ ಕೋಟೆಯ ರಕ್ಷಣೆಗೆ ಮುಂದಾದರು. ಬಳಿಕ ಕಹಳೆ ಊದಿ ಸೈನಿಕರಿಗೆ ಎಚ್ಚರಿಕೆ ನೀಡಿದ ಅವರ ಸಾಹಸ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಇಂತಹ ವೀರ ಮಹಿಳೆಯ ಆದರ್ಶಗಳು ಯುವಜನತೆಗೆ ಸ್ಫೂರ್ತಿಯಾಗಬೇಕು ಎಂದರು. 


ಸುದ್ದಿ ಓದಿ