ಇಂಡಿ

ಸಾಮೂಹಿಕ ವಿವಾಹ ಕಾರ್ಯಕ್ರಮ ದುಂದುವೆಚ್ಚಕ್ಕೆ ಕಡಿವಾಣ : ಡಾ. ಚನ್ನಸಿಧ್ಧರಾಮ ಶ್ರೀ

ಸಾಮೂಹಿಕ ವಿವಾಹ ಕಾರ್ಯಕ್ರಮ ದುಂದುವೆಚ್ಚಕ್ಕೆ ಕಡಿವಾಣ :  ಡಾ. ಚನ್ನಸಿಧ್ಧರಾಮ ಶ್ರೀ

ಇಂಡಿ14:  ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಬಡ-ಜನರಿಗೆ ಅನುಕೂಲವಾಗುತ್ತದೆ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಬೀಳುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು. 

ಸೋಮವಾರ ಪಟ್ಟಣದ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿ ಮಾತನಾಡಿದರು. 

ಶ್ರೀಮಂತರು ಸಹ ಆಡಂಬರದ ಮದುವೆ ಮಾಡದೆ, ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳಬೇಕು. ಆಡಂಬರದ ಮದುವೆಗೆ ಖರ್ಚಾಗುವ ಹಣವನ್ನು ಬಡ ವರ್ಗದ ಜನರಿಗೆ ಅವಶ್ಯವಿರುವ ಉಪಕರಣ ಅಥವಾ ಇನ್ನಿತರ ಕಾರ್ಯಗಳಿಗೆ ವಿನಿಯೋಗಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಆ ಬಡ ಕುಟುಂಬ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ಇಂದು ಸಾಕಷ್ಟು ಸೌಹಾರ್ದ ಬ್ಯಾಂಕುಗಳು ಹುಟ್ಟಿಕೊಳ್ಳುತ್ತಿವೆ. ಆ ಬ್ಯಾಂಕುಗಳು ಬರೀ ಲಾಭಕ್ಕಾಗಿ ದುಡಿಯುತ್ತಿವೆ. ಶಾಂತೇಶ್ವರ ಸೌಹಾರ್ದ ಬ್ಯಾಂಕ್ ಸಾಮೂಹಿಕ ವಿವಾಹ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ಕೊಡುಗೆ ನೀಡುತ್ತಿದೆ ಎಂದ ಅವರು ಲಾಭದಾಯಕ ಸೌಹಾರ್ದ ಸಂಸ್ಥೆಗಳು ಸಹ ಇಂತಹ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮಾತನಾಡಿ ಶಾಂತೇಶ್ವರ ದೇವಸ್ಥಾನ ಕಮೀಟಿ ಅವರು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮದುವೆಗಳಲ್ಲಿ  ಆಗುತ್ತಿರುವ ದುಂದು ವೆಚ್ಚವನ್ನು ಕಡಿಮೆ ಮಾಡಿ ಬಡವರ ಬದುಕಿಗೆ ಆಸರೆಯಾಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದು ಎಂದರು. 

ಶ್ರೀಶೈಲದಲ್ಲಿ ಜಾಗ ನೀಡಿದರೆ ಜಾತ್ರಾ ನಿಮಿತ್ಯ 25 ಲಕ್ಷ ರೂ.ಗಳಲ್ಲಿ ಯಾತ್ರಾನಿವಾಸ ಕಟ್ಟುವುದಾಗಿ ಶ್ರೀಶೈಲ ಶ್ರೀಗಳಿಗೆ ಭರವಸೆ ನೀಡಿದ್ದೇನೆ. ಆದರೆ ಶ್ರೀಗಳು ಜಾಗ ಸಿಗುವುದು ಕಷ್ಟ ಎಂದು ಹೇಳಿದ್ದರು. ನಂತರದಲ್ಲಿ ಶ್ರೀಶೈಲ ಪುಣ್ಯಕ್ಷೇತ್ರದಲ್ಲಿ ಜಾಗ ನೀಡಿದ್ದರಿಂದ 2 ಕೋಟಿ ವೆಚ್ಚದಲ್ಲಿ 3 ಮಹಡಿಯ ಯಾತ್ರಿ ನಿವಾಸ ಕಟ್ಟಡ ಕಾರ್ಯ ಆರಂಭಿಸಲಾಗಿದೆ. ಈಗಾಗಲೆ 2 ಮಹಡಿ ಪೂರ್ಣಗೊಂಡಿದ್ದು,ಬರುವ ಯುಗಾದಿ ಹಬ್ಬದ ಒಳಗಾಗಿ ಪೂರ್ಣಗೊಳ್ಳಬಹುದು ಎಂದು ಹೇಳಿದರು. 

ಶಾಂತೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಸರ್ವ ಭಕ್ತರ ಸಹಕಾರದಿಂದಲೇ ಜಾತ್ರಾ ಮಹೋತ್ಸವ ಇಷ್ಟೊಂದು ಅದ್ದೂರಿಯಾಗಿ ನೆರವೇರಲು ಸಾಧ್ಯವಾಗಿದೆ. ನಗರದ ಸಾರ್ವಜನಿಕರು ಶಾಂತೇಶ್ವರ ದೇವರ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದು, ಕಮೀಟಿ ವತಿಯಿಂದ ಸಾಮಾಜಿಕ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ, ಶೀಲವಂತ ಉಮರಾಣಿ ಮಾತನಾಡಿದರು. 

ನಾಗಣಸೂರಿನ ಶ್ರೀಕಂಠ ಶಿವಾಚಾರ್ಯರು, ಶಿರಶ್ಯಾಡದ ಅಭಿನವ ಮುರಘೇಂದ್ರ ಶಿವಾಚಾರ್ಯರು, ಗೋಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ಅರ್ಜುಣಗಿ ರೇಣುಕ ಶಿವಾಚಾರ್ಯರು, ಗೊರನಾಳ ಶ್ರೀಗಳು, ಶಾಂತಯ್ಯ ಹಿರೇಮಠ, ಮಹಾಂತೇಶ ಶಾಸ್ತ್ರಿ, ಮಾಂತೇಶ ಹಿರೇಮಠ, ಅನೀಲ ಜಮಾದಾರ, ಎಂ.ಎಫ್‌. ದೋಶಿ, ತಾಲೂಕಾ ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ, ಸಿ.ಡಿ.ಪಿ.ಓ. ಸಿ. ಎಂ. ಕಾಳೆ, ಅಶೋಕಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವುಡೆ, ರಾಮಪ್ಪ ಎಲ್‌.ಕೆ, ಭಾರತಿ ವಾಲಿ, ನಿಂಗನಗೌಡ ಬಿರಾದಾರ ವಿದ್ಯುತ್ ವಿಭಾಗ ಹುಬ್ಬಳ್ಳಿ, ಭೀಮನಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಹೀರಾಚಂದ ಹಳ್ಳಿ,  ಎಸ್‌.ಎಸ್‌. ಪಾಟೀಲ, ಶ್ರೀಕಾಂತ ದೇವರ, ಶ್ರೀಕಾಂತ ಕೂಡಿಗನೂರ, ಪ್ರಶಾಂತ ಧೂಮಗೊಂಡ, ಅಜೀತ ಹಿರೇಮಠ, ಯಮನಾಜಿ ಸಾಳುಂಕೆ, ಸತ್ತಾರ ಬಾಗವಾನ, ಸೋಮು ನಿಂಬರಗಿಮಠ, ದೇವೆಂದ್ರ ಕುಂಬಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಸುದ್ದಿ ಓದಿ