ಉರಗರಕ್ಷಕ ಮಲ್ಲಿಕಾರ್ಜುನ ಗಾಣಿಗೇರ
ಮಂಜುನಾಥ ಜೋತಿ
ಬೈಲಹೊಂಗಲ : ಹಾವು ಎಂಬ ಹೆಸರು ಕೇಳಿದರೇನೇ ಒಂಥರಾ ಭಯ, ಚಿಕ್ಕ ಹಾವಿನ ಮರಿಯಿಂದ ಹಿಡಿದು ದೊಡ್ಡ ಗಾತ್ರದ ಹಾವುಗಳು ದೂರದಲ್ಲಿ ಎಲ್ಲೇ ಕಂಡರೂ ಅತ್ತ ಹೆಜ್ಜೆ ಕೂಡ ಇಡದ ಜನರೇ ಜಾಸ್ತಿ. ಮನೆ, ಶಾಲೆ, ಕಛೇರಿ ಹೀಗೆ ಎಲ್ಲೇ ಹಾವು ಪ್ರತ್ಯಕ್ಷ ಆದರೂ ಒಂದು ಕ್ಷಣ ಭಯ ಆಗುವುದಂತೂ ಖಂಡಿತ. ದುಡ್ಡು ಕೊಟ್ಟರೂ ಹಾವು ಹಿಡಿಯಲು ಸಮಯಕ್ಕೆ ಯಾರೂ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ಉರಗ ಪ್ರೇಮಿ , ಉರಗ ಸಂರಕ್ಷಕ ಯಾವುದೇ ತರಹದ ಫಲಾಪೇಕ್ಷೆ ಪಡದೆ ಉಚಿತವಾಗಿ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡುತ್ತಿದ್ದಾರೆ.
ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಲ್ಲಿಕಾರ್ಜುನ ಗಾಣಿಗೇರ ಅವರು ಸುಮಾರು 20 ವರ್ಷಗಳಿಂದ ಉರಗರಕ್ಷಕನಾಗಿದ್ದು ಸಾವಿರಕ್ಕೂ ಅಧಿಕ ವಿವಿಧ ಬಗೆಯ ಹಾವುಗಳನ್ನು ರಕ್ಷಿಸಿದ್ದಾರೆ. ಬೈಲಹೊಂಗಲ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಯಾರೇ ಕರೆ ಮಾಡಿದರೂ , ತನ್ನ ಸ್ವಂತ ಖರ್ಚುನಲ್ಲಿ ಪ್ರಯಾಣಿಸಿ, ಒಂದು ರುಪಾಯಿ ಅಪೇಕ್ಷೆ ಇಟ್ಟುಕೊಳ್ಳದೇ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವತ್ತಿನವರೆಗೂ ಸಾವಿರಾರು ಹಾವುಗಳನ್ನ ಸುರಕ್ಷಿತವಾಗಿ ಹಿಡಿದು, ಸಂರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಜೀವದ ಹಂಗು ತೊರೆದು ಹಾವುಗಳಿಂದ ಜನರನ್ನು ರಕ್ಷಿಸುವದರ ಜೊತೆಗೆ ಪ್ರಕೃತಿ ಸಮತೋಲನಕ್ಕಾಗಿ ಹಾವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಹಾವುಗಳ ಸಂರಕ್ಷಣೆ ಪುಣ್ಯದ ಕೆಲಸ ಎಂದು ನಂಬಿರುವ ಇವರು, ಬದುಕಿರುವ ತನಕ ಹಾವು ಸಂರಕ್ಷಣೆ ಕಾರ್ಯ ಮುಂದುವರೆಸಿಕೊಂಡು ಹೊಗುವ ಅಭಿಲಾಸೆ ಹೊಂದಿದ್ದಾರೆ.
ಬೈಲಹೊಂಗಲ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಎಲ್ಲೇ ಹಾವು ಕಂಡರೂ ಜನರು ತಕ್ಷಣ ಇವರಿಗೆ ಕರೆ ಮಾಡಿ ಕರೆಸಿಕೊಳ್ಳುತ್ತಾರೆ. ಈ ತನಕ ಉಚಿತವಾಗಿ ಹಾವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಗಳಲ್ಲಿ ಬಿಟ್ಟಿರುವ ಮಲ್ಲಿಕಾರ್ಜುನ ಬಗ್ಗೆ ಸಾರ್ವಜನಿಕರಿಗೆ ಅಪಾರ ಮೆಚ್ಚುಗೆ ಇದೆ. ಪಟ್ಟಣ, ಸುತ್ತಮುತ್ತ ಎಲ್ಲಿಯೇ ಹಾವುಗಳು ಕಾಣಿಸಿಕೊಂಡರೂ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.