ಪೊಲೀಸ್ ಇಲಾಖೆಯವರು ಪ್ರಶ್ನೆ ಎದುರಿಸುವ ಭಯದಿಂದ ಸಭೆಗೆ ಬಂದಿಲ್ಲ
ಶಾಸಕ ಯಶವಂತ್ರಾಯಗೌಡ ಪಾಟೀಲ್ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ : ಪ್ರಗತಿ ಪರೀಶೀಲನೆ ಸಭೆ
ಇಂಡಿ: ಪೊಲೀಸ್ ಇಲಾಖೆಯವರು ರಸ್ತೆಗಿಳಿದು ಸಾರ್ವಜನಿಕರ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಈ ಸಭೆಗೆ ಬಂದರೆ ಸಭೆಯಲ್ಲಿ ಪ್ರಶ್ನೆ ಮಾಡುತ್ತಾರೆಂಬ ಭಯದಿಂದಲೇ ಅವರು ಸಭೆಗೆ ಬಂದಿಲ್ಲ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ್ ಆಕ್ರೋಶಗೊಂಡರು.
ಸೋಮವಾರ ಆಡಳಿತಸೌಧದಲ್ಲಿ ಹಮ್ಮಿಕೊಂಡ ಪ್ರಗತಿ ಪರೀಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ನಾಲ್ಕೂ ರಸ್ತೆಗಿಳಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ನಗರದಲ್ಲಿ 15 ದಿನದಲ್ಲಿ 13 ಕಳ್ಳತನ ಪ್ರಕರಣಗಳು ನಡೆದಿವೆ. ಪೊಲೀಸರು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಬರುವ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇನೆಂದು ಆಕ್ರೋಶಗೊಂಡರು.
ಅಲ್ಲದೆ ಸಭೆಗೆ ಆಗಮಿಸಬೇಕಿದ್ದ ಕೆಲ ಅಧಿಕಾರಿಗಳು ಅವರ ಸಿಬ್ಬಂದಿಗಳನ್ನು ಸಭೆಗೆ ಕಳಿಸಿದ್ದಕ್ಕೆ ತೀವ್ರ ಆಕೋಶ ವ್ಯಕ್ತಪಡಿಸಿದ ಶಾಸಕರು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸಭೆಯಲ್ಲಿರಿ ಸಿಬ್ಬಂದಿಗಳಿದ್ದರೆ ಹೊರಹೋಗಿ ಎಂದು ಪರವಾಗಿ ಬಂದ ಸಿಬ್ಬಂದಿಗಳಿಗೆ ಹೊರಗೆ ಕಳುಹಿಸಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಧಾಬಾಗಳಲ್ಲಿ ಅಫೀಮು, ಗಾಂಜಾ ಧಂಧೆ ನಡೆಯುತ್ತಿದೆ. ಅದನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸಿ ಅಲ್ಲದೆ ತಾಲೂಕಿನ ಎರಡ್ಮೂರು ಕಡೆ ಅಕ್ರಮ ಸಾರಾಯಿ ತಯಾರಿ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ. ಅಧಿಕಾರಿಗಳು ಕೂಡಲೆ ಅದನ್ನು ತಡೆಯಿರಿ ಎಂದು ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನ್ಯಾಯಾಲಯದಲ್ಲಿ ಎನ್ಜಿಟಿ. ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು ಮುಂದೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಗಣಿ ಮತ್ತು ಭುಗರ್ಭ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸುತಿದ್ದಂತೆ ಉತ್ತರಿಸಿದ ಅಧಿಕಾರಿ ಈಗಾಗಲೆ ನ್ಯಾಯಾಲಯದ ತೀರ್ು ಹೊರಬಿದ್ದಿದ್ದು ಮೇಲಾಧಿಕಾರಿಗಳು ಭೀಮಾನದಿ ಪಾತ್ರದಲ್ಲಿ ನಾಲ್ಕೈದು ಸ್ಥಳ ಗುರುತಿಸಿ ಅಲ್ಲಿಂದ ಮರಳು ಸಾಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಶಾಸಕ ಪಾಟೀಲ್ ಮರಳು ಸಾಗಾಣಿಕೆ ಪ್ರಾರಂಭ ಮಾಡಿದರೆ ರಸ್ತೆಗಳೆಲ್ಲ ಹದಗೆಡುತ್ತಿವೆ. ಹೀಗಾಗಿ ನಮ್ಮ ತಾಲೂಕಿನ ಮರಳಿನಿಂದ ಬರುವ ಟ್ಯಾಕ್ಸ ನಮ್ಮ ತಾಲೂಕಿನಲ್ಲಿಯೇ ಖರ್ಚಾಗುವಂತೆ ಕ್ರಮವಹಿಸಲು ಚಿಂತಿಸಿ, ಅದರಿಂದಲೇ ರಸ್ತೆ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು. ಅಲ್ಲದೆ ಯಂತ್ರಗಳಿಂದ ಮರಳು ಎತ್ತಿದರೆ ನೀರು ಕಲುಷಿತವಾಗುತ್ತದೆ. ಆ ಭಾಗದ ಜನ ನದಿ ನೀರನ್ನೇ ಕುಡಿಯುತ್ತಾರೆ. ಹೀಗಾಗಿ ನೀರು ಕಲುಷಿತವಾಗದಂತೆ ಏನಾದರೂ ಉಪಾಯ ಕಂಡುಕೊಳ್ಳಿ ಎಂದು ಸೂಚಿಸಿದರು.
ತಾಲೂಕಿನ ವಿವಿಧೆಡೆ ಶಾಲಾ ಮಕ್ಕಳಿಗೆ ಬಸ್ ಸೌಕರ್ಯ ಸಿಗದಂತಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದರು.
ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರುಗಳೇ ಬೀಗ ಜಡಿಯುವಂತಹದ್ದು ಏನಾಗಿತ್ತು? ಇದು ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಸರ್ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಿಬ್ಬಂದಿಗಳು ಬಂದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ಪುರಸಭೆಯಲ್ಲಿ ಅವ್ಯವಹಾರವಾಗದಂತೆ ನೋಡಿಕೊಳ್ಳಿ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದಂದಲೇ ಪುರಸಭೆಗೆ ಬೀಗ ಜಡಿಯಲಾಗಿದೆ ಎಂದು ಮುಖ್ಯಾಧಿಕಾರಿ ವಿರುದ್ಧ ಅಸಮಾಧಾನಗೊಂಡರು. ಟ್ರಾಫಿಕ್ ಸಿಗ್ನಲ್, ಸಿಸಿಟಿವಿ ರಿಪೇರಿ ಸೇರಿದಂತೆ ಜಂಟಿಯಾಗಿ ಪೊಲೀಸ್ ಹಾಗೂ ಪುರಸಭೆಯ ಅಧಿಕಾರಿಗಳ ವಿರುದ್ಧ ಶಾಸಕರು ಹರಿಹಾಯ್ದರು.
ಅಂಗನವಾಡಿಗಳಲ್ಲಿ 18 ಹುದ್ದೆಗಳು ಖಾಲಿ ಇದ್ದರೂ ಇಲ್ಲಿಯವರೆಗೂ ತುಂಬಲಾಗಿಲ್ಲ. ಹುದ್ದೆ ಭರ್ತಿ ಮಾಡಿಕೊಳ್ಳಲು ಎಷ್ಟು ಕಾಲಾವಕಾಶ ಬೇಕು? ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿ ಜಿಲ್ಲಾಧಿಕಾರಿಗಳೆ ಅಂಗನವಾಡಿ ಸಿಬ್ಬಂದಿಗಳ ನೇಮಕ ಮಾಡುವ ಕಮಿಟಿ ಅಧ್ಯಕ್ಷರಿರುತ್ತಾರೆ ಎಂದು ಹೇಳುತ್ತಿದ್ದಂತೆ ಎಷ್ಟು ತಿಂಗಳ ಕಾಲಾವಕಾಶಬೇಕು. ಒಂಭತ್ತು ತಿಂಗಳು ಹುದ್ದೆ ಖಾಲಿ ಇದ್ದರೂ ಇನನೂ ಭರ್ತಿಯಾಗಿಲ್ಲ ನಿಮಗೆ ಸರಿಯಾದ ಜ್ಞಾನವಿದೆಯೇ? 3 ತಿಂಗಳಲ್ಲಿ ಹುದ್ದೆ ಭರ್ತಿಯಾಗಬೇಕು ಆದರೆ ಇದುವರೆಗೂ ಇನ್ನೂ ಖಾಲಿ ಇವೆ ಎಂದು ಅಸಮಾಧಾನಗೊಂಡರು.
ಮಸಳಿ ರಸ್ತೆ ಮಾಡಿದ ಗುತ್ತಿಗೆದಾರನ ಪರವಾನಿಗೆ ಬ್ಲಾಕ್ ಲಿಸ್ಟಗೆ ಹಾಕಿ, ರಸ್ತೆ ನಿರ್ಮಾಣ ಮಾಡುವಾಗ ಇದ್ದ ಮೇಲುಸ್ತುವಾರಿ ಅಧಿಕಾರಿಯ ವಿರುಧ್ಧ ಕ್ರಮ ಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.,
ಶಾಸಕರ ಆಪಾದನೆ
ಆಹಾರ ಇಲಾಖೆ ಹಾಗೂ ಪೊಲೀಸರು ಕಳ್ಳರೊಂದಿಗೆ ಜಂಟಿಯಾಗಿ ಕೂಡಿಕೊಂಡು ಸರಕಾರದಿಂದ ಬರುವ ಅಕ್ಕಿಯನ್ನು ಸಂಗ್ರಹ ಮಾಡಿ ಬೇರೆ ರಾಜ್ಯಕ್ಕೆ ಸಾಗಿಸುತ್ತಿದ್ದಾರೆ ಎಂಬ ಆರೋಪವಿದೆ. ರಾತ್ರಿ 11 ಘಂಟೆಯ ನಂತರ ಅಕ್ಕಿ ವಾಹನ ಬೇರೆ ರಾಜ್ಯಕ್ಕೆ ಹೋಗುತ್ತಿದೆ.
-ಯಶವಂತ್ರಾಯಗೌಡ ಪಾಟೀಲ್
ಶಾಸಕರು ಇಂಡಿ
ಸಭೆಯಲ್ಲಿ ತಹಸೀಲ್ದಾರ ಬಸವರಾಜ ಐ.ಈ, ತಾ.ಪಂ ಅಧಿಕಾರಿ ಸುನಿಲ್ ಮದ್ದಿನ್, ಕೆಡಿಪಿ ನಾಮನಿರ್ದೇಶನ ಸದಸ್ಯರಾದ ಅದೃಸ್ಯಪ್ಪ ವಾಲಿ, ಅಣ್ಣಪ್ಪ ಮದರಿ, ಹಣಮಂತ ಚಾಬುಕಸವಾರ ಇದ್ದರು.
ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ವರದಿ ವಾಚನ ಮಾಡಿದರು.