ಬೆಳಗಾವಿ

ವಿಶ್ವಾಸ ವೈದ್ಯ ಟ್ರೋಫಿ ಚೋಟಾ ಬೌಂಡರಿ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ

ವಿಶ್ವಾಸ ವೈದ್ಯ ಟ್ರೋಫಿ ಚೋಟಾ ಬೌಂಡರಿ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ


         ಸವದತ್ತಿ 23: ಕ್ರೀಡೆಗಳು ಯುವಕರಲ್ಲಿ ಕೇವಲ ದೈಹಿಕ ಸದೃಢತೆಯನ್ನು ಮಾತ್ರ ನೀಡದೆ, ಶಿಸ್ತು, ಒಗ್ಗಟ್ಟು ಮತ್ತು ಆರೋಗ್ಯಕರ ಕ್ರೀಡಾಸ್ಫೂರ್ತಿಯನ್ನು ಬೆಳೆಸುತ್ತವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ತಾಲೂಕಿನ ಮುನವಳ್ಳಿ ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿನ ಐತಿಹಾಸಿಕ ಪಂಚಲಿಂಗೇಶ್ವರ ಕುಸ್ತಿ ಮೈದಾನದಲ್ಲಿ ಆಯೋಜಿಸಲಾಗಿರುವ ವಿಶ್ವಾಸ ವೈದ್ಯ ಟ್ರೋಫಿ ಚೋಟಾ ಬೌಂಡರಿ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ವಿಶ್ವಾಸ ವೈದ್ಯ ಅವರು ಬ್ಯಾಟಿಂಗ್ ಮಾಡುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಿದರು.

          ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಇಂತಹ ಪಂದ್ಯಾವಳಿಗಳು ಅತ್ಯುತ್ತಮ ವೇದಿಕೆಯಾಗಲಿವೆ. ಗ್ರಾಮೀಣ ಭಾಗದಲ್ಲಿ ಹಲವು ಪ್ರತಿಭೆಗಳಿದ್ದು, ಅವುಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ದೊರೆತಾಗ ಮಾತ್ರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮುಂಬರುವ ದಿನಗಳಲ್ಲಿ ಕ್ಷೇತ್ರದ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು.

               ಕ್ರೀಡಾಂಗಣಗಳ ಅಭಿವೃದ್ಧಿ, ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಕ್ರೀಡಾಪಟುಗಳಿಗೆ ಅಗತ್ಯ ನೆರವು ನೀಡಲು ಬದ್ಧವಾಗಿರುವುದಾಗಿ ಅವರು ಭರವಸೆ ನೀಡಿದರು. ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದೇ ಮುಖ್ಯವಾಗಿದ್ದು, ಕ್ರೀಡಾ ನಿಯಮಗಳನ್ನು ಪಾಲಿಸುವ ಮೂಲಕ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.

             ಪಂದ್ಯಾವಳಿಯ ಉದ್ಘಾಟನೆಗೆ ಆಗಮಿಸಿದ ಶಾಸಕ ವಿಶ್ವಾಸ ವೈದ್ಯ ಅವರನ್ನು ಆಯೋಜಕರು ಹಾಗೂ ಸ್ಥಳೀಯ ಕ್ರೀಡಾಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ಮುನವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಕ್ರೀಡಾಭಿಮಾನಿಗಳು ಮತ್ತು ಗ್ರಾಮಸ್ಥರು ಮೈದಾನದಲ್ಲಿ ನೆರೆದು ಆಟಗಾರರನ್ನು ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಮುನವಳ್ಳಿ ಗ್ರಾಮದ ಹಿರಿಯ ಮುಖಂಡರು, ಹಾಗೂ ಪಂದ್ಯಾವಳಿಯ ಆಯೋಜಕ ಸಮಿತಿಯ ಸದಸ್ಯರು ಹಾಗೂ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ