ಬಸವ ಮಂಟಪ ಕೃತಿ ವಿರುದ್ಧ ಡಾ. ಪ್ರಭಾಕರ ಕೋರೆ ತೀವ್ರ ಖಂಡನೆ
ಬೆಳಗಾವಿ 23 : ರವಿ ಹಂಜ್ ನಡೆಗೆ - ಡಾ. ಪ್ರಭಾಕರ ಕೋರೆ ತೀವ್ರ ಖಂಡನೆ’ ಬಸವ ಮಂಟಪ’ ರವಿ ಹಂಜ್ ಅವರ ವಿವಾದಿತ ಕೃತಿಯನ್ನು ಖಂಡಿಸಿ, ಕಠಿಣ ಕ್ರಮ ಕೈಗೊಳ್ಳಲು ಆಗ್ರಹಬಸವಣ್ಣನವರ ಪವಿತ್ರ ತತ್ವ, ವಚನ ಸಾಹಿತ್ಯ ಮತ್ತು ವೀರಶೈವ-ಲಿಂಗಾಯತ ಧರ್ಮದ ಮೂಲ ಆಶಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ರವಿ ಹಂಜ್ ಬರೆದಿರುವ ’ಬಸವ ಮಂಟಪ’ ವಿವಾದಿತ ಕೃತಿಯನ್ನು ಕೆಎಲ್ಇ ಕಾಹೇರ್ ಕುಲಾಧಿಪತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ಅತ್ಯಂತ ತೀವ್ರವಾಗಿ ಖಂಡಿಸಿದ್ದಾರೆ.
ವಿಶ್ವಗುರು ಬಸವಣ್ಣನವರು ಸರ್ವಸಮಾನತೆಯ ಹರಿಕಾರರು. ಸಮಾನತೆ, ಕಾಯಕ, ದಾಸೋಹ, ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ನೀಡಿದವರು. ಅವರ ಕುರಿತು ಮಾಡುವ ಅಪವಾದ ಅಕ್ಷಮ್ಯವಾದುದು. ಕೋಟ್ಯಂತರ ಬಸವ ಭಕ್ತರ ಶ್ರದ್ಧೆ, ನಂಬಿಕೆ ಮತ್ತು ಆತ್ಮಗೌರವಕ್ಕೆ ಧಕ್ಕೆ ತರುವ ದುಸ್ಸಾಹಸವನ್ನು ರವಿ ಹಂಜ್ ಮಾಡಿದ್ದಾರೆ. ಬಸವಣ್ಣನವರ ಕುರಿತು ಮಾತನಾಡುವ ಹಕ್ಕು ಅವರಿಗಿಲ್ಲ. ಅವರೊಬ್ಬ ಸಂಶೋದಕರಲ್ಲ, ಕೇವಲ ಪ್ರಚಾರಕ್ಕಾಗಿ ಕೀಳು ಹೇಳಿಕೆಗಳನ್ನು ನೀಡಿರುವುದು ಅಪರಾಧ.
ಅವರು ವೀರಶೈವ ಲಿಂಗಾಯತ ಸಮುದಾಯಕುರಿತು ಬಳಸಿರುವ ಪದಗಳು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಬಸವ ಪರಂಪರೆಯನ್ನು ತಿರುಚಿ, ಅಪಾರ್ಥ ಮಾಡಿ, ಭಕ್ತ ಸಮುದಾಯದ ಭಾವನೆಗಳಿಗೆ ತೀವ್ರ ನೋವುಂಟು ಮಾಡುವ ಯಾವುದೇ ಬರಹವನ್ನು ವೀರಶೈವ-ಲಿಂಗಾಯತ ಸಮಾಜ ಎಂದಿಗೂ ಸಹಿಸುವುದಿಲ್ಲ. ರವಿ ಹಂಜ್ ತಮ್ಮ ಕೃತಿಯ ಮೂಲಕ ಸಮಾಜದಲ್ಲಿ ಗೊಂದಲ, ಅಪನಂಬಿಕೆ ಮತ್ತು ವಿಭಜನೆ ಸೃಷ್ಟಿಸುವ, ಬಸವಣ್ಣನವರ ಬಗ್ಗೆ ತಪ್ಪು ಸಂದೇಶ ರವಾನಿಸುವ ಅಕ್ಷಮ್ಯ ಪ್ರಯತ್ನ ಮಾಡಿರುವುದು ಅತ್ಯಂತ ಖಂಡನಾರ್ಹ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ.
ಇದು ಕೇವಲ ಒಂದು ಬರಹವಲ್ಲ, ಇದು ಇಡೀ ಸಮುದಾಯದ ಆತ್ಮಗೌರವಕ್ಕೆ ಮಾಡಿದ ಘಾಸಿಯಾಗಿದೆ. ವಿವಾದಿತ ಕೃತಿಯನ್ನು ಸರ್ಕಾರ ಈಗಾಗಲೇ ಮುಟ್ಟುಗೋಲು ಹಾಕಿರುವುದು ಸ್ವಾಗತಾರ್ಹ. ಸರ್ಕಾರ ಲೇಖಕರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಯಾವುದೇ ವ್ಯಕ್ತಿ ಇಂತಹ ದುಸ್ಸಾಹಸಕ್ಕೆ ಮುಂದಾಗದಂತೆ ಕಠಿಣ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು, ಮಹಾತ್ಮ ಬಸವಣ್ಣನವರನ್ನು ಅವಮಾನಿಸಲು ಯಾರಿಗೂ ಯಾವುದೇ ಹಕ್ಕಿಲ್ಲ. ವಾಕ್ ಸ್ವಾತಂತ್ರ್ಯಕ್ಕೂ ಒಂದು ಮಿತಿ ಇದೆ,
ಅದನ್ನು ಮೀರಿದಾಗ ಕಾನೂನು ತನ್ನ ಕೆಲಸ ಮಾಡಲೇಬೇಕು. ಸರ್ಕಾರವು ಈ ವಿಷಯವನ್ನು ಇನ್ನೂ ಹೆಚ್ಚಿನ ಗಂಭೀರ ತೆಗೆದುಕೊಂಡು ಬಸವ ಭಕ್ತ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಮಹಾಸಭೆಯು ಲಕ್ಷಾಂತರ ಭಕ್ತರೊಂದಿಗೆ ನಿರ್ಣಾಯಕವಾಗಿ ಹೋರಾಟ ನಡೆಸಲು ಬದ್ಧವಾಗಿರುತ್ತದೆ ಎಂದು ಡಾ. ಪ್ರಭಾಕರ ಕೋರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.