ಜಲಜೀವನ ಯೋಜನೆಗೆ ಶಾಸಕ ಶ್ರೀಮಂತ ಪಾಟೀಲ ಗುದ್ದಲಿ ಪೂಜೆ
ಲೋಕದರ್ಶನ ವರದಿ
ಅಥಣಿ 29: ಕಾಗವಾಡ ಮತಕ್ಷೇತ್ರದ ಶಿವನೂರ ಗ್ರಾಮದ 508 ಮನೆಗಳಿಗೆ 135 ಲಕ್ಷ ರೂ.ಗಳ ಅನುದಾನದಲ್ಲಿ ಜಲಜೀವನ ಯೋಜನೆಯಡಿ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಶಿವನೂರ ಗ್ರಾಮದ ಚೆನ್ನಮ್ಮ ವೃತ್ತದಲ್ಲಿ ಜಲಜೀವನ್ ಯೋಜನೆಗೆ, 160 ಲಕ್ಷ ಅನುದಾನದ 2.7 ಕಿಲೋ ಮೀಟರ್ ಉದ್ದದ ಕಿರಣಗಿ-ಶಿವನೂರ ಗ್ರಾಮಗಳ ಸಂಪರ್ಕ ರಸ್ತೆಗೆ ಭೂಮಿ ಪೂಜೆ ಹಾಗೂ 3ಕೋಟಿ ವೆಚ್ಚದಲ್ಲಿ ಈಗಾಗಲೇ ನಿರ್ಮಾಣಗೊಂಡ ಬಾಂದಾರ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿಯೇ ಅತೀ ಹೆಚ್ಚು ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ತಂದಿರುವೆ ಈಗಾಗಲೇ ಸಾಕಷ್ಟು ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಪೂರ್ಣಗೊಂಡಿದ್ದು, ಇನ್ನೂ ಅನೇಕ ಕಟ್ಟಡಗಳು ಪ್ರಗತಿಯಲ್ಲಿವೆ ಎಂದರು. ಶಿವನೂರ ಗ್ರಾಮಸ್ಥರು ಅನೇಕ ವರ್ಷಗಳಿಂದ ತಮ್ಮ ಗ್ರಾಮದಲ್ಲಿ ಸುಸಜ್ಜಿತ ಗರಡಿ ಮನೆ ನಿರ್ಮಿಸಿಕೊಡಬೇಕು ಎಂದು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಶಿವನೂರ ಸೇರಿದಂತೆ ಕಾಗವಾಡ ಮತಕ್ಷೇತ್ರದ 10 ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯಡಿ ಗರಡಿ ಮನೆಗಳನ್ನು ನಿರ್ಮಿಸಲು ಯೋಜನೆ ಸಿದ್ಧವಾಗಿದೆ ಎಂದರು.
ಶಿವನೂರ ಗ್ರಾಮದ ಮೂಲಕ ಹರಿದು ಹೋಗುವ ಅಗ್ರಹಾರಿಣಿ ನದಿಗೆ ಇನ್ನೆರಡು ಸ್ಥಳಗಳಲ್ಲಿ ಬಾಂದಾರಗಳನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದು, ಈ ಸಂಬಂಧ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಬಾಂದಾರ ನಿರ್ಮಾಣಕ್ಕೆ ನೀಲ ನಕ್ಷೆ ತಯಾರಿಸಲು ಸೂಚಿಸುತ್ತೇನೆ ಎಂದ ಅವರು ಗ್ರಾಮದಲ್ಲಿ ಯಾವುದೇ ಸಮಸ್ಯೆ ಬರಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಶ್ರೀಮಂತ ಪಾಟೀಲ ಹೇಳಿದರು.
ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಇದೇ ಡಿಸೆಂಬರ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದ್ದು, ಈ ಯೋಜನೆಗೆ ಸಿಎಮ್ ಬಸವರಾಜ ಬೊಮ್ಮಾಯಿ ಹೆಚ್ಚು ಆಸಕ್ತಿ ವಹಿಸಿ ಎಲ್ಲ ಅಡತಡೆಗಳನ್ನು ಬಗೆ ಹರಿಸಿದ್ದಾರೆ ಅಲ್ಲದೆ ಈ ಯೋಜನೆಯ ಉದ್ಘಾಟನೆಗೂ ಕೂಡ ಮುಖ್ಯಮಂತ್ರಿಗಳೇ ಆಗಮಿಸುತ್ತಾರೆ ಎಂದ ಅವರು ಈ ಯೋಜನೆ ಪೂರ್ಣಗೊಳ್ಳುವಿಕೆಯಿಂದ ಈ ಭಾಗದ ಪ್ರತಿ ಗ್ರಾಮದಲ್ಲಿ ಕನಿಷ್ಠ 1 ಲಕ್ಷ ಟನ್ ಕಬ್ಬ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತನ ವೀರಣ್ಣಾ ವಾಲಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ರವೀಂದ್ರ ಮೂರ್ಗಾಲಿ, ಧುರೀಣರಾದ ಶಿವಪುತ್ರ ನಾಯಿಕ, ರಾಜು ಮರಡಿ, ಪ್ರಕಾಶ ಕೊಂಗಾಲಿ, ವಿಜಯ ಅಡಹಳ್ಳಿ, ವಿಜಯ ಆಜೂರ, ಶಂಭು ಮಗದುಮ್, ಲವಾ ಮಗದುಮ್, ಶ್ರೀಶೈಲ ಪಾಟೀಲ, ಹಣಮಂತ ಗುಮತಾಜ ಸೇರಿದಂತೆ ಶಿವನೂರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.