ವಾಲಿದ ವಿದ್ಯುತ್ ಕಂಬಗಳು: ಅಪಾಯಕ್ಕೆ ಆಹ್ವಾನ
ಲೋಕದರ್ಶನ ವರದಿ
ಬೈಲಹೊಂಗಲ 25: ತಾಲೂಕಿನ ಸಂಪಗಾಂವ ಹೆಸ್ಕಾಂ ಶಾಖಾ ಕಛೇರಿ ವ್ಯಾಪ್ತಿಯ ತಿಗಡಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲಿನ ಪರಿಸರದಲ್ಲಿ ವಿದ್ಯುತ್ ಸಂಪರ್ಕದ ಕಂಬಗಳು ಬೀಳುವ ಹಂತದಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.
ತಾಲೂಕಿನ ತಿಗಡಿಯಿಂದ ಜಕ್ಕನಾಯ್ಕನಕೊಪ್ಪದ ರಸ್ತೆಗೆ ಹೊಂದಿಕೊಂಡಿರುವ ಸುಮಾರು ವಿದ್ಯುತ್ ಕಂಬಗಳು ತೀರಾ ತ್ರಿಕೋನಾಕಾರದಲ್ಲಿ ವಾಲಿದ್ದರೂ ಸಹ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವದರಿಂದ ಅಪಾಯ ಯಾವಾಗಲಾದರೂ ಸಂಭವಿಸಬಹುದಾಗಿದೆ.
ಸದಾ ಜನ ಸಂಚಾರದ ರಸ್ತೆಯಾಗಿರುವ ಇಲ್ಲಿ ಹಲವಾರು ದಿನಗಳಿಂದ ಜೀವಕ್ಕೆ ಅಪಾಯ ಒಡ್ಡುವ ಕಂಬಗಳನ್ನು ಇಲಾಖೆ ದುರಸ್ತಿ ಮಾಡದ ಕಾರಣ ಈ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ, ರೈತರಿಗೆ, ವಾಹನ ಸವಾರರಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ ತೀವ್ರ ಆತಂಕ ಎದುರಾಗಿದೆ. ಇಲ್ಲಿನ ಕಂಬಗಳು ಅಸ್ತವ್ಯಸ್ತವಾದ ಕುರಿತು ಈಗಾಗಲೇ ಹೆಸ್ಕಾಂನ ಸ್ಥಳೀಯ ಶಾಖಾಧಿಕಾರಿಗೆ ತಿಳಿಸಿದ್ದರೂ ಸಹ ಕ್ಯಾರೇ ಎನ್ನುತ್ತಿಲ್ಲವೆಂದು ನಾಗರಿಕರು ಆರೋಪಿಸುತ್ತಿದ್ದಾರೆ.
ಕಾರಣ ಜೀವಹಾನಿ ಆಗುವ ಮೊದಲೇ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಪರಿಸರದಲ್ಲಿನ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ವಿಳಂಬ ಮಾಡಿದರೆ ಜೀವಹಾನಿ ಕಟ್ಟಿಟ್ಟ ಬುತ್ತಿಯಾಗಿದ್ದು ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತಲಿದ್ದು ಕೂಡಲೇ ಜನರಿಗೆ ಆಗುವ ತೊಂದರೆ ತಪ್ಪಿಸಬೇಕು.
ಅನಿಸಿಕೆ- ತಿಗಡಿಯಿಂದ ಜಕ್ಕನಾಯ್ಕನಕೊಪ್ಪದ ರಸ್ತೆಗೆ ಹೊಂದಿಕೊಂಡಿರುವ ಅಪಾತಕ್ಕೆ ಆಹ್ವಾನ ನೀಡುವ ವಿದ್ಯುತ್ ಕಂಬಗಳ ಬಗ್ಗೆ ಕೂಡಲೇ ಗಮನ ಹರಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ಬಗೆ ಹರಿಸಲಾಗುವದು. ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವದು.
ಉಮೇಶ ಗೊರವನಕೊಳ್ಳ
ಶಾಖಾಧಿಕಾರಿ
ಹೆಸ್ಕಾಂ ಸಂಪಗಾಂವ ತಾ. ಬೈಲಹೊಂಗಲ