ಅಥಣಿ

ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ

ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ

ಅಥಣಿ 17: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಮತದಾರರು ಕೈಗೊಂಡ ತಪ್ಪು ನಿರ್ಧಾರದ ಪರಿಣಾಮ ಲಕ್ಷ್ಮಣ ಸವದಿ ಬಸವರಾಜ ಬೊಮ್ಮಾಯಿ ಅವರ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಹೇಳಿದರು. 

ಅವರು ಕೊಟ್ಟಲಗಿ ಗ್ರಾಮದಲ್ಲಿ ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಒಂದು ವೇಳೆ ಸವದಿಯವರು ಶಾಸಕ ಸ್ಥಾನದಲ್ಲಿದ್ದರೆ ಅವರು ಇಂದಿನ ಸರಕಾರದಲ್ಲಿ ನನಗಿಂತ ಪ್ರಭಾವಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದ ಅವರು ನನ್ನ ಮತಕ್ಷೇತ್ರದಲ್ಲಿಯೇ ನಾನು ನನ್ನ ಇಲಾಖೆ ಮೂಲಕ ಒಂದೇ ಒಂದು ರಸ್ತೆ ಕಾಮಗಾರಿಗೆ 33 ಕೋಟಿ ಅನುದಾನ ಕೊಟ್ಟಿದ್ದೇನೆ ಆದರೆ ಲಕ್ಷ್ಮಣ ಸವದಿಯವರ ಭಾವನಾತ್ಮಕ ಸ್ನೇಹಕ್ಕೆ ಪ್ರತಿಯಾಗಿ ಈ ರಸ್ತೆ ಕಾಮಗಾರಿಗೆ 35 ಕೋಟಿ ಅನುದಾನ ಬಿಡುಗಡೆ ಮಾಡಿರುವೆ ಎಂದು ಹೇಳಿದರು. 

ಅನೇಕ ವರ್ಷಗಳಿಂದ ಲಕ್ಷ್ಮಣ ಸವದಿ ಹಾಗೂ ನಾನು ಅತ್ಯಂತ ಆತ್ಮೀಯ ಸ್ನೇಹಿತರು. ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತಾಗ ನಾನು ಗೆದ್ದ ಉತ್ಸಾಹ ಮರೆತು ಹೋಗುವಷ್ಟು ದುಃಖವಾಗಿತ್ತು ಎಂದ ಅವರು ಮುಂದೆಯೂ ಕೂಡ ಅಥಣಿ ಮತಕ್ಷೇತ್ರದ ಅಭಿವೃದ್ಧಿಗೆ ಮತ್ತು ಜನಪರ ಕಾರ್ಯಗಳಿಗೆ ನನ್ನ ಇಲಾಖೆಯಿಂದ ಸಹಕಾರ ನೀಡುತ್ತೇನೆ ಎಂದು ಹೇಳಿದರು. 

ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ನಿಪ್ಪಾಣಿ ಕೊಟ್ಟಲಗಿ ರಾಜ್ಯ ಹೆದ್ದಾರಿಯ ಕಾಮಗಾರಿಯ ಅಭಿವೃದ್ಧಿಗಾಗಿ ಅನೇಕ ವರ್ಷಗಳಿಂದ ಈ ಭಾಗದ ಜನರ ಬೇಡಿಕೆ ಇತ್ತು ಮತ್ತು ವಿರೋಧ ಪಕ್ಷದ ಕೆಲವರು ರಾಜ್ಯ ಹೆದ್ದಾರಿಯಲ್ಲಿ ಗಿಡ ನೆಟ್ಟು ಹೋರಾಟ ಮಾಡಿದ್ದು ತಕ್ಷಣ ನಾನು ಲೋಕೋಪಯೋಗಿ ಸಚಿವರನ್ನು ಭೆೇಟಿ ಮಾಡಿ ಈ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಗೆ ಆಗ್ರಹಿಸಿದ್ದೆ, ನನ್ನ ಬೇಡಿಕೆಗೆ ಸ್ಪಂದಿಸಿದ ಸಚಿವರು ಸುಮಾರು 35ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು. 

ನಾನು ಹಾಗೂ ಸಿ.ಸಿ ಪಾಟೀಲ ಆತ್ಮೀಯ ಸ್ನೇಹಿತರು. ಅವರಿಗೆ ನೋವಾದರೆ ನನಗೂ ನೋವಾದಂತೆ ಎನ್ನುವ ಭಾವನೆಯ ಸ್ನೇಹಿತರು ನಾವು, ಯಾವನೋ ಒಬ್ಬ ಅವರಿಗೆ ಗುಂಡು ಹೊಡೆದಾಗ ನನಗೆ ಅತೀವ ನೋವು ಉಂಟಾಗಿತ್ತು ಅಲ್ಲದೆ ನಾನು ಚುನಾವಣೆಯಲ್ಲಿ ಸೋತಾಗ ನನಗಿಂತ ಹೆಚ್ಚು ಬೇಜಾರು ಪಟ್ಟವರು ಸಿ.ಸಿ.ಪಾಟೀಲರು ಇಂತಹ ಸ್ನೇಹ ನಮ್ಮದು ಎಂದು ಹೇಳುವಾಗ ಭಾವನಾತ್ಮಕವಾದರು. 

ಸಾನಿಧ್ಯ ವಹಿಸಿದ್ದ ಗಚ್ಚಿನ ಮಠದ ಶ್ರೀಗುರು ಮುರುಘೇಂದ್ರ ಶಿವಬಸವ ಸ್ವಾಮೀಜಿ, ಶೇಗುಣಸಿಯ ವಿರಕ್ತ ಮಠದ ಸ್ವಾಮೀಜಿ, ಅಮರೇಶ್ವರ ಮಾಹಾರಾಜರು, ತೆಲಸಂಗ ವಿರಕ್ತ ಮಠದ ವೀರೇಶ ದೇವರು ಮಾತನಾಡಿದರು. 

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸಿದರಾಯ ಯಲ್ಲಡಗಿ ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಕೆ.ಎಂ.ಎಫ್ ನಿರ್ದೆಶಕ ಅಪ್ಪಾಸಾಹೇಬ ಅವತಾಡೆ, ಧುರೀಣರಾದ ಚಿದಾನಂದ ಸವದಿ, ಗುರು ಮುಗ್ಗನವರ, ಎ.ಎಂ.ಖೋಬ್ರಿ, ಗೀರೀಶ ಸಜ್ಜನ, ಶಿವರುದ್ರ ಘೂಳಪ್ಪನವರ, ರಾಮನಗೌಡ ಪಾಟೀಲ, ಅರುಣ ಭಾಸಿಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ