ರಾಣೇಬೆನ್ನೂರಲ್ಲಿ ಪಂಚರತ್ನ ಯಾತ್ರೆ ಕುಮಾರಸ್ವಾಮಿ ಆಗಮನ
ರಾಣಿಬೆನ್ನೂರ:ಫೆ 13 ಸ್ಥಳೀಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗೆ ಫೆ. 15 ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪ್ರಮುಖ ನಾಯಕರು ನಗರಕ್ಕೆ ಆಗಮಿಸಿ ಚಾಲನೆ ನೀಡಲಿದ್ದಾರೆ. ಎಂದು ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಹೇಳಿದರು.
ಜೆಡಿಎಸ್ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು, ಮುಂಬರುವ ವಿಧಾನಸಭಾ ಚುನಾವಣೆಯ ಹಿತ ದೃಷ್ಟಿಯಿಂದ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಹಲಗೇರಿ ಗ್ರಾಮಕ್ಕೆ ಫೆ. 15 ರಂದು ಬೆಳಗ್ಗೆ 10 ಗಂಟೆಗೆ ಪಂಚರತ್ನ ಯಾತ್ರೆ ಆಗಮಿಸಲಿದೆ. ಅಲ್ಲಿ ಜೆಡಿಎಸ್ ಪಕ್ಷದಿಂದ ಅದ್ದೂರಿಯಾಗಿ ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದವರು ವಿವರಿಸಿದರು. ಅಲ್ಲಿಂದ ಪಂಚರತ್ನ ಯಾತ್ರೆಯು ಕುಪ್ಪೆಲೂರ ಮಾರ್ಗವಾಗಿ ತುಮ್ಮಿನಕಟ್ಟಿ, ಕೋಟಿಹಾಳ, ಹನುಮನಹಳ್ಳಿ, ಇಟಗಿ ಮಾರ್ಗವಾಗಿ ನಗರಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದೆ.
ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದಿಂದ ಪಂಚರತ್ನ ಯಾತ್ರೆಯ ಭವ್ಯ ಮೆರವಣಿಗೆಯು ಪೂರ್ಣಕುಂಬ ಹೊತ್ತ ಮಹಿಳೆಯರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಇಲ್ಲಿನ ನಗರಸಭೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸುವರು ಎಂದರು.
ಬಹಿರಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ರಾಜ್ಯ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಂಸುದ್ದಿನ್ ಖಾನ, ಜಿಲ್ಲಾಧ್ಯಕ್ಷ ಜಯಾನಂದ್ ಜಾವಣ್ಣನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಹೊನ್ನಜ್ಜೇರ, ಮಾಜಿ ಶಾಸಕ ಎಚ್.ಎಸ್ ಶಿವಶಂಕರ, ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ, ಮಹೇಶಗೌಡ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು ಎಂದರು. ಅನಂತರ ಸಂಜೆ ಪಂಚರತ್ನ ಯಾತ್ರೆಯು ತಾಲೂಕಿನ ಚಳಗೇರಿ, ಕರೂರ ಮಾರ್ಗವಾಗಿ ಮಾಕನೂರ ಗ್ರಾಮಕ್ಕೆ ತೆರಳಲಿದೆ ಅಲ್ಲಿ ರೈತ ಸಂಘದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ತಾಲೂಕಿನ ಕವಲೆತ್ತು, ಕೊಡಿಯಾಲ, ಐರಣಿ, ಹಿರೇಬಿದರಿ ಮಾರ್ಗವಾಗಿ ಮೇಡ್ಲೇರಿ ಗ್ರಾಮಕ್ಕೆ ತರಳಿ ಅಲ್ಲಿಯೇ ಕುಮಾರಸ್ವಾಮಿಯವರು ವಾಸ್ತವ್ಯ ಮಾಡಲಿದ್ದಾರೆ. ಫೆ 16 ರಂದು ಬೆಳಗ್ಗೆ 8 ಗಂಟೆಗೆ ಕುಮಾರಸ್ವಾಮಿಯವರು ತಾಲೂಕಿನ ಗಂಗಾಜಲ ತಾಂಡಾದ ಸೇವಾಲಾಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಚಳ್ಳಕೇರಿಯತ್ತ ಪ್ರಯಾಣ ಬೆಳಸುವರು ಎಂದು ಗೌಡಶಿವಣ್ಣನವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಹೊನ್ನಜ್ಜೇರ, ತಾಲೂಕಾಧ್ಯಕ್ಷ ಸುಭಾಸಗೌಡ ರಾಮಲಿಂಗಣ್ಣವರ, ಉಜ್ಜಪ್ಪ ಹಾದಿಮನಿ, ಮೌನೇಶ ಬಡಿಗೇರ, ಶಂಕ್ರಣ್ಣ ಲಮಾಣಿ, ಖಲಂದರ್ ಪಠಾಣ, ಕರಬಸಪ್ಪ ಶಿಡಗನಹಾಳ, ಪ್ರವೀಣ್ ಹೊದಿಗ್ಗೇರಿ, ಮಲ್ಲಿಕಾರ್ಜುನ ಹಲಗೇರಿ ಸೇರಿದಂತೆ ಮತ್ತಿತರರು ಇದ್ದರು.