ಬೈಲಹೊಂಗಲ

ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಕವಟಗಿಮಠ ಭೇಟಿ: ಚರ್ಚೆ

ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಕವಟಗಿಮಠ ಭೇಟಿ: ಚರ್ಚೆ

ಬೈಲಹೊಂಗಲ 26: ಕರ್ನಾಟಕ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠರವರು ಶನಿವಾರ ತಾಲೂಕಿನ ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ಕೇಂದ್ರದಿಂದ ನೀಡುತ್ತಿರುವ ಸೇವೆಗಳ ಕುರಿತು ಹಾಗೂ ಕೃಷಿಯಲ್ಲಿ ಕೈಗೊಳ್ಳುವಂತಹ ನೂತನ ತಂತ್ರಜ್ಞಾನಗಳ ಬಗ್ಗೆ ವಿಜ್ಞಾನಿಗಳೊಂದಿಗೆ ಚರ್ಚಿಸಿದರು.     

ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠರವರು ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಆಡು ಮತ್ತು ಕುರಿ ಸಾಕಾಣಿಕೆಗಾಗಿ ಎನ್‌ಆರ್‌ಇಜಿ ಯೋಜನೆಯಡಿ ರೈತರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಯೋಜನೆಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು. ಹೆಚ್ಚು ಮೌಲ್ಯವನ್ನು ಹೊಂದಿರುವ ಹಾಗೂ ಆದಾಯ ನೀಡುವ ಶ್ರೀಗಂಧ ಬೆಳೆಯನ್ನು ಬೆಳೆಯಲು ರೈತರನ್ನು ಉತ್ತೇಜಿಸುವಂತೆ ತಿಳಿಸಿದರು.      

ವಾತಾವರಣದ ವೈಪರೀತ್ಯದಿಂದಾಗಿ ಉಷ್ಣತೆಯಲ್ಲಿ ಏರುಪೇರು ಹಾಗೂ ಅಕಾಲಿಕ ಮಳೆಯಿಂದಾಗಿ ರೈತರಿಗೆ ಹೆಚ್ಚು ಹಾನಿಯಾಗುತ್ತಿರುವುದರಿಂದ ರೈತರಿಗೆ ಹವಾಮಾನ ಆಧಾರಿತ ಸಲಹೆಗಳನ್ನು ಕಾಲಕಾಲಕ್ಕೆ ನೀಡುವಂತೆ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವಿಜ್ಞಾನಿಗಳಿಗೆ ಸಲಹೆ ನೀಡಿದರು.  ರೈತರಿಗೆ ಅನುಕೂಲವಾಗುವಂತಹ ಬೆಳೆ ವಿಮೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಇಂತಹ ಅನೇಕ ರೈತಪರ ಯೋಜನೆಗಳನ್ನು ಈ ಭಾಗದ ರೈತರಿಗೆ ಮುಟ್ಟುವಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು.  ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ