ಪಂಜಾಬ್ ಸರಕಾರವನ್ನು ತಕ್ಷಣ ವಜಾಕ್ಕೆ ಕಾಸುಗೌಡ ಆಗ್ರಹ
ಇಂಡಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಿಗದಿತ ಸರಕಾರಿ ಕಾರ್ಯಕ್ರಮಕ್ಕೆ ತೆರಳುತ್ತಿರುವ ದಾರಿಯಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡದೇ ಬೇಜವಾಬ್ದಾರಿಯಿಂದ ನಡೆದುಕೊಂಡ ಪಂಜಾಬ್ ಸರಕಾರವನ್ನು ತಕ್ಷಣ ವಜಾ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಆಗ್ರಹಿಸಿದ್ದಾರೆ.
ಅವರು ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿ, ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ 2 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜನಪರ ಯೋಜನೆಗಳ ಅನುಷ್ಠಾನಗೊಳಿಸುವ ಕಾರ್ಯಕ್ರಮಕ್ಕೆ ತೆರಳಬೇಕಿತ್ತು. ಆದರೆ ಹವಾಮಾನ ವೈಪರಿತ್ಯದ ಪರಿಣಾಮ ರಸ್ತೆ ಮಾರ್ಗದ ಮೂಲಕ ತೆರಳುತ್ತಿರುವ ವೇಳೆ ಪ್ರಧಾನಿ ಮೋದಿಯವರ ಸುರಕ್ಷತೆಯ ಜವಾಬ್ದಾರಿ ಪಂಜಾಬ್ ಸರಕಾರದ್ದಾಗಿದ್ದರೂ ಕೂಡ ದಾರಿ ಮಧ್ಯದಲ್ಲಿಯೇ ಅನಿವಾರ್ಯವಾಗಿ 20 ನಿಮಿಷಗಳ ಕಾಲ ಪಾಕಿಸ್ತಾನ ಬಾರ್ಡರಗೆ ಅತೀ ಹತ್ತಿರದಲ್ಲಿರುವ ಫ್ಳೈ ಓವರ ಮೇಲೆ ನಿಲ್ಲಬೇಕಾಯಿತು. ಆದರೆ ಅಷ್ಟು ಸಮಯದ ವರೆಗೂ ಪಂಜಾಬ ಸರಕಾರದ ಯಾರೋಬ್ಬರು ಪ್ರತಿನಿಧಿ ಆಗಮಿಸದೇ ಇದ್ದುದು ಪ್ರಧಾನಿಯವರ ಜೀವಕ್ಕೆ ಅಪಾಯ ತಂದೊಡ್ಡುವ ಒಳಸಂಚು ಇರಬಹುದು ಎಂದರು.
ಪ್ರಧಾನಿಯಂತಹ ವ್ಯಕ್ತಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿರುವ ಪಂಜಾಬ ಸರಕಾರ ಸಾಮಾನ್ಯ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯವಿಲ್ಲ ಇಂತಹ ಸರಕಾರವನ್ನು ತಕ್ಷಣ ವಜಾ ಗೊಳಿಸಬೇಕು ಮತ್ತು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಪಂಜಾಬ ಜನರನ್ನು ರಕ್ಷಿಸಬೇಕು ಎಂದು ಕಾಸುಗೌಡ ಬಿರಾದಾರ ಅವರು ಆಗ್ರಹಿಸಿದ್ದಾರೆ.