ಧಾರವಾಡ - ಹುಬ್ಬಳ್ಳಿ

ಕನ್ನಡ ಭಾಷೆ ಆತ್ಮವಿಶ್ವಾಸದ ಭಾಷೆಯಾಗಿದೆ: ಪುರುಷೋತ್ತಮ ಬಿಳಿಮಲೆ

ಕನ್ನಡ ಭಾಷೆ ಆತ್ಮವಿಶ್ವಾಸದ ಭಾಷೆಯಾಗಿದೆ: ಪುರುಷೋತ್ತಮ ಬಿಳಿಮಲೆ

ಧಾರವಾಡ 22 : ಕನ್ನಡ ಭಾಷೆ ಪ್ರಪಂಚದಲ್ಲೇ ಸಮೃದ್ಧ ಭಾಷೆಯಾಗಿದ್ದು ಇದೊಂದು ಆತ್ಮವಿಶ್ವಾಸದ ಭಾಷೆಯಾಗಿದೆ. ಕನ್ನಡ ಭಾಷೆಗೆ ಸಶಕ್ತವಾದ ಭಾಷಾ ನೀತಿ ಅಗತ್ಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.  

ಅವರು ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ 3ನೇ ದಿನದ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ  ‘ಶಿಕ್ಷಣ ಸುಧಾರಕರು’ ಪುಸ್ತಕ ಬಿಡುಗಡೆ, ಸುಗಮ ಸಂಗೀತ, ಶಿಕ್ಷಣ ಸಂಸ್ಥೆ ಸ್ಮರಣೆ, ಹಿರಿಯ ಸದಸ್ಯರಿಗೆ ಗೌರವ ಸಮರೆ​‍್ಣ ಹಾಗೂ ತತ್ವಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು, ನಮ್ಮ ಹಿರಿಯರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ್ದಾರೆ. ಆದರೆ ಸರ್ಕಾರ ಆಂಗ್ಲ ಭಾಷೆಯ ಶಾಲೆಗಳನ್ನು ತೆರೆದಿರುವುದರಿಂದ ಭವಿಷ್ಯದಲ್ಲಿ ಕನ್ನಡ ಭಾಷೆಯ ಸ್ಥಿತಿಗತಿ ಏನು ಎಂಬುದನ್ನು  ಆತ್ಮವಿಮರ್ಶೆ ಪ್ರತಿಯೊಬ್ಬ ಕನ್ನಡಿಗರು ಮಾಡಬೇಕಿದೆ. ಭಾರತೀಯ 22 ಭಾಷೆಗಳಲ್ಲಿ ಹಿಂದಿ ಭಾಷೆಯದೇ ಪಾರಮ್ಯ ಇದ್ದು, 40 ವರ್ಷಗಳಲ್ಲಿ ಕನ್ನಡದ ಬೆಳವಣಿಗೆ ಶೇಕಡಾ 3.7 ಮಾತ್ರ. ಹಿಂದಿನಂತೆ ಈಗ ಕನ್ನಡಕ್ಕೆ ಇಂದು ಯಾವುದೇ ಕಾನೂನಿನ ಬಲ ಇಲ್ಲದಾಗಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ ಅವರು ಇಂತಹ ಶಕ್ತಿಶಾಲಿ ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ. ಭಾಷೆ ನಾಶವಾದರೆ ಸಂಸ್ಕೃತಿಯೇ ನಾಶವಾದಂತೆ ಎಂದರು.  

ಶಿಕ್ಷಣ ಸಂಸ್ಥೆಯ ಸ್ಮರಣೆಯಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆ(ಕೆ.ಇ.ಬೋರ್ಡ್‌) ಕುರಿತು ಕನ್ನಡ ಉಪನ್ಯಾಸಕ ಸಂಗಮೇಶ ಹಡಪದ ಮಾತನಾಡಿ, ಧಾರವಾಡದ ಕೆ.ಇ. ಬೋರ್ಡ್‌ ನಾಡಿನ ಅತ್ಯಂತ ಹಳೆಯದಾದ ಸಂಸ್ಥೆಯಾಗಿದೆ. ಇದೊಂದು ಪ್ರತಿಷ್ಠಿತ ಸಂಸ್ಥೆ. ದಿ. ನಾರಾಯಣರಾವ ಕಬ್ಬೂರರಂತಹ ಪ್ರಾತಃಸ್ಮರಣೀಯರು ಹುಟ್ಟುಹಾಕಿದ ಸಂಸ್ಥೆಯಾಗಿದೆ. ಏಕೀಕರಣದ ಸಂದರ್ಭದಲ್ಲಿ ಕರ್ನಾಟಕ ಎಂಬ ಪರಿಕಲ್ಪನೆಯನ್ನು ಜನಮಾನಸದಲ್ಲಿ ಮೂಡಿಸಿದ್ದೇ ಕೆ.ಇ.ಬೋರ್ಡ್‌ ಸಂಸ್ಥೆ, ಶಿಕ್ಷಣದ ವ್ಯಾಪಾರಿಕರಣದಿಂದ ಮುಕ್ತವಾದ ಈ ಸಂಸ್ಥೆ ಇಂದು ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಈ ನಾಡಿಗೆ 5 ಹೆಸರಾಂತ ಚಿಂತಕರನ್ನು ಶಿಕ್ಷಣ ತಜ್ಞರನ್ನು ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನೂ ನೀಡಿದ ಕೀರ್ತಿ ಇದೆ ಎಂದರು.  

ಡಾ. ಎಂ.ಎಂ. ಕಲಬುರ್ಗಿ  ಟ್ರಸ್ಟ್‌ ಅಧ್ಯಕ್ಷ ಡಾ. ವೀರಣ್ಣ ರಾಜೂರ ‘ಶಿಕ್ಷಣ ಸುಧಾರಕರು’ ಕೃತಿ ಬಿಡುಗಡೆ ಮಾತನಾಡಿ, ಪರಭಾಷಾ ಪ್ರಾಭಲ್ಯ ಬರುವುದೇ ಸವಾಲಿನ ಕೆಲಸ. ಇಂದು ಕನ್ನಡದ ಅಸ್ಮಿತೆಗೆ ಹೋರಾಡುವ ಕಾಲ ಸನ್ನದ್ಧವಾಗಿದೆ. ಕ.ವಿ.ವ. ಸಂಘ ಅನೇಕ ಮೌಲಿಕ ಕೃತಿ ಪ್ರಕಟಿಸಿದ್ದು ತನ್ನ ವಾಗ್ಭೂಷಣ ಪತ್ರಿಕೆಗೆ ಮರುಜೀವ ನೀಡಬೇಕಿದೆ ಎಂದರು.  

ಕೃತಿ ಸಂಪಾದಕ ಡಾ. ಧನವಂತ ಹಾಜವಗೋಳ ಸಂಪಾದಕರ ನುಡಿಗಳನ್ನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಚಂದ್ರಕಾಂತ ಬೆಲ್ಲದ, ಡಾ. ಡಿ.ಎಸ್‌. ರಾಜಪುರೋಹಿತ ಇದ್ದರು. ಸಂಘದ ಹಿರಿಯ ಸದಸ್ಯ ಸಿ.ಎಂ. ಚನ್ನಬಸಪ್ಪ ಅವರನ್ನು ಕಲ್ಪನಾ ದೊಡಗೌಡರ ಸನ್ಮಾನಿಸಿದರು.  

ಡಾ. ಸದಾಶಿವ ಮರ್ಜಿ ಹಾಗೂ ಅನುರಾಗ ಸಾಂಸ್ಕೃತಿಕ ಬಳಗ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ತಬಲಾದಲ್ಲಿ ಅನೀಲ ಮೇತ್ರಿ ಸಾಥ ನೀಡಿದರು. ಬಂಕಾಪುರದ ಸಿದ್ಧಲಿಂಗಪ್ಪ ಚನ್ನಬಸಪ್ಪ ನರೇಗಲ್ಲ ತತ್ವಪದಗಳನ್ನು ಹಾಡಿದರು.  ಶಿವಯ್ಯ ಇಟಗಿಮಠ ತಬಲಾ ಸಾಥ್ ನೀಡಿದರು.  

ವೀರಣ್ಣ ಒಡ್ಡೀನ ಸ್ವಾಗತಿಸಿ, ನಿರೂಪಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಸಂಜೀವ ಕುಲಕರ್ಣಿ, ಡಾ. ಶೈಲಜಾ ಅಮರಶೆಟ್ಟಿ, ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ವೆಂಕಟೇಶ ಮಾಚಕನೂರ, ಬಾಳಪ್ಪಾ ಚಿನಗುಡಿ, ಡಾ. ಲಿಂಗರಾಜ ಅಂಗಡಿ, ಬಸವರಾಜ ಬೆಂಗೇರಿ, ಎಂ.ಎಂ. ಚಿಕ್ಕಮಠ, ಹರ್ಷ ಡಂಬಳ, ಬಿ.ಜಿ. ಬಾರ್ಕಿ, ಅರುಣ ನಾಗೀರ, ಶಿವಾನಂದ ಹೂಗಾರ, ಆಶಾ ಸೈಯ್ಯದ ಸೇರಿದಂತೆ ಮುಂತಾದವರಿದ್ದರು. 


ಸುದ್ದಿ ಓದಿ