ವಿಜಯಪುರ

ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯಲು ಕರವೇ ಆಗ್ರಹ

ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯಲು ಕರವೇ ಆಗ್ರಹ



               ಕೊಲ್ಹಾರ 18 : ಕರ್ನಾಟಕ ರಾಜ್ಯ ಸರ್ಕಾರವು ಯಾವುದೇ ಮುನ್ನೆಚ್ಚರಿಕೆ ನೀಡದೆ ಏಕಾಏಕಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ, ಕೂಡಲೇ ದರ ಏರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ’ಕರ್ನಾಟಕ ರಕ್ಷಣಾ ವೇದಿಕೆ’ ತಾಲ್ಲೂಕು ಘಟಕ ಅಧ್ಯಕ್ಷ ರವಿ ಗೊಳಸಂಗಿ ನೇತೃತ್ವದಲ್ಲಿ ಮಾನ್ಯ ತಹಶೀಲ್ದಾರ ಅವರ ಮುಖಾಂತರ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಬುಧುವಾರ ಮನವಿ ಸಲ್ಲಿಸಲಾಯಿತು.

             ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರು, ಬಡವರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.  ಸರ್ಕಾರ ಕೈಗೊಂಡಿರುವ ಈ ದರ ಏರಿಕೆಯ ಕ್ರಮ ಅತ್ಯಂತ ಖಂಡನೀಯವಾಗಿದ್ದು, ತಕ್ಷಣವೇ ಮುಖ್ಯಮಂತ್ರಿಗಳು ಈ ಆದೇಶವನ್ನು ವಾಪಸ್ ಪಡೆಯಬೇಕು.

             ಜನರಿಗಾಗಿ ಇರಬೇಕಾದ ಸರ್ಕಾರಗಳು ಜನರ ಮೇಲೆಯೇ ಆರ್ಥಿಕ ಹೊರೆಯನ್ನು ಹೊರಿಸುತ್ತಿರುವುದು ಸರಿಯಲ್ಲ. ಅಧಿಕಾರಕ್ಕೆ ಬರುವ ಮುನ್ನ ನೂರಾರು ಭರವಸೆಗಳನ್ನು ನೀಡಿ, ಈಗ ಬೆಲೆ ಏರಿಕೆ ಹಾಗೂ ಪ್ರಯಾಣ ದರ ಹೆಚ್ಚಳದ ಮೂಲಕ ಬಡವರ ಬದುಕಿಗೆ ಕೊಳ್ಳಿ ಇಡುತ್ತಿರುವುದು ಸರಿಯಾದ ಆಡಳಿತ ನೀತಿಯಲ್ಲ ಎಂದು ಸಂಘಟನೆಯು ತೀವ್ರವಾಗಿ ಖಂಡಿಸಿದೆ.  ಒಂದು ವೇಳೆ ಸರ್ಕಾರವು ಈ ಕೂಡಲೇ ಬಸ್ ದರ ಏರಿಕೆ ಹಾಗೂ ಇತರೆ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯದಿದ್ದರೆ,

              ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.   ಶ್ರೀಧರ ಬಳೆಗಾರ, ಪ್ರದೀಪ ಪಾಟೀಲ ,ಯಮನೂರಿ ಮಾಕಾಳಿ ,ಪರಶುರಾಮ ಮಾಕಾಳಿ ,ಶಿವು ವಾಲಿಕಾರ ,ಸುರೇಶ ದಳವಾಯಿ ,ಅಶೋಕ ಗಣಿ ,ಸುರೇಶ ಸಾರವಾಡ ಇತ್ತರರು ಇದ್ದರು . 


ಸುದ್ದಿ ಓದಿ