ಮಳಖೇಡದ ಕಾಗಿಣಾ ನದಿ ತೀರದಲ್ಲಿರುವುದೇ ಜಯತೀರ್ಥರ ಮೂಲ ವೃಂದಾವನ : ಜೋಶಿ
ಅಥಣಿ 22: ಮಳಖೇಡದ ಜಯತೀರ್ಥರ ಮೂಲ ವೃಂದಾವನದ ಕುರಿತಾಗಿ ತಪ್ಪು ಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದ್ದು, ಮೂಲ ವೃಂದಾವನ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಕಾಗಿಣಾ ನದಿ ತೀರದಲ್ಲಿಯೇ ಇದೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಎಸ್.ವ್ಹಿ.ಜೋಶಿ ಹೇಳಿದರು.
ಅವರು ಅಥಣಿ ಬ್ರಾಹ್ಮಣ ಸಮಾಜ ಬಾಂಧವರಿಂದ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿಲ್ಲ ಎಂದು ರಾಯರಮಠದವರು ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡುತ್ತಿರುವುದನ್ನು ಖಂಡಿಸಿ ತಹಶೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು. ವಿಶ್ವಕಂಡ ಅಪರೂಪದ ತತ್ವಜ್ಞಾನಿ, ಮಧ್ವಾಚಾರ್ಯರ ಪರಂಪರೆಯ 5ನೇ ಪೀಠಾಧಿಪತಿಗಳಾಗಿದ್ದ ಜಯತೀರ್ಥರು ತತ್ವಜ್ಞಾನಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಎಲ್ಲರಿಗೂ ಮಾನ್ಯರಾದ ಇವರು ಇಡೀ ದೇಶ ಸಂಚಾರ ಮಾಡಿದ ಸುಮಾರು 600 ವರ್ಷಗಳ ಹಿಂದೆ ತಮ್ಮ ಇಹಲೋಕ ಯಾತ್ರೆ ಮುಗಿಸಿ ಮಳಖೇಡದಲ್ಲಿಯೇ ವೃಂದಾವನ ಪ್ರವೇಶ ಮಾಡಿದ್ದಾರೆ ಅಂದಿನಿಂದ ಇಂದಿನವರೆಗೂ ಆಸ್ತಿಕ ಸಮುದಾಯಕ್ಕೆ ಜಯತೀರ್ಥರ ಮೂಲ ವೃಂದಾವನ ಇರುವ ಮಳಖೇಡ ಶ್ರದ್ಧಾ ಕೇಂದ್ರವಾಗಿದೆ ಎಂದರು.
ಈ ಕುರಿತಾಗಿ ಅನೇಕ ದಾಸ ಶ್ರೇಷ್ಠರು, ಇತಿಹಾಸಕಾರರು, ಸಂಶೋಧಕರು, ಮಠಾಧೀಶರು ದಾಖಲೆಗಳೊಂದಿಗೆ ಸಮರ್ಥಿಸಿಕೊಂಡಿದ್ದಾರೆ, ಆದರೆ ಈಗ ಏಕಾಏಕಿಯಾಗಿ ರಾಯರಮಠದವರು ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿ ಇಲ್ಲ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ನಡುಗಡ್ಡೆಯಾದ ನವ ವೃಂದಾವನದಲ್ಲಿದೆ ಎಂದು ಅಪಪ್ರಚಾರ ಮಾಡಿ ಭಕ್ತರಲ್ಲಿ ಅನಗತ್ಯ ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿದರು.
ಬ್ರಾಹ್ಮಣ ಸಮಾಜದ ಮುಖಂಡ ಶ್ರೀನಿವಾಸಾಚಾರ್ಯ ಬಿಳ್ಳೂರ ಮಾತನಾಡಿ, ಅನಗತ್ಯದ ಈ ವಿವಾದಕ್ಕೆ ಪುಷ್ಠಿ ಎನ್ನುವಂತೆ ರಾಯರಮಠದವರು ಇದೇ ಆಷಾಢ ಮಾಸದ ಜುಲೈ 6,7 ಹಾಗೂ 8 ಈ ಮೂರು ದಿನಗಳವರೆಗೆ ಜಯತೀರ್ಥರ ಆರಾಧನೆಯನ್ನು ನವ ವೃಂದಾವನದಲ್ಲಿ ವೈಭವೋಪೇತವಾಗಿ ಆಚರಿಸಲು ಭಕ್ತರಿಗೆಲ್ಲ ಕರೆ ನೀಡಿದ್ದು, ಇದು ಜಯತೀರ್ಥರ ಭಕ್ತರಲ್ಲಿ ನೋವು ಉಂಟುಮಾಡಿದೆ ಎಂದ ಅವರು 600 ವರ್ಷಗಳಿಂದ ಶ್ರೀರಾಯರ ಮಠದವರು ಸೇರಿದಂತೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಇತಿಹಾಸಕಾರರು, ಸಂಶೋಧನಾಕಾರರು ಕೂಡ ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿಯೇ ಇದೆ ಎಂದು ಒಪ್ಪಿಕೊಂಡಿದ್ದಾರೆ. ಸರಕಾರಿ ದಾಖಲೆಗಳು ಅಷ್ಟು ಮಾತ್ರವಲ್ಲ ರಾಯರ ಮಠದ ಹಿರಿಯ ಯತಿಗಳ ಹೇಳಿಕೆಗಳು ದಾಖಲೆಗಳೂ ಕೂಡ ಜಯತೀರ್ಥರ ಮೂಲ ವ್ರಂದಾವನ ಮಳಖೇಡದಲ್ಲಿಯೇ ಇದೆ ಎಂಬ ಸತ್ಯಾಂಶವನ್ನು ಸಾರಿ ಹೇಳುತ್ತಿವೆ ಆದರೂ ಕೂಡ ರಾಯರಮಠದವರು ನವ ವೃಂದಾವನದಲ್ಲಿರುವ ಉತ್ತರಾಧಿಮಠದ ಶ್ರೀ ರಘುವರ್ಯ ತೀರ್ಥರ ವೃಂದಾವನವನ್ನೇ ಶ್ರೀ ಜಯತೀರ್ಥರ ವೃಂದಾವನ ಎಂದು ಬಿಂಬಿಸಿ ಪೂಜಾ, ಆರಾಧನೆಗಳನ್ನು ಮಾಡುತ್ತಿರುವುದನ್ನು ಸರಕಾರ ತಡೆದು ಅನಗತ್ಯ ವಿವಾದ ಮತ್ತು ಘರ್ಷಣೆಗೆ ತಡೆಹಾಕಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ ಕಟಕಭಾವಿ, ಬ್ರಾಹ್ಮಣ ಸಮಾಜ ನೀಡಿದ ಈ ಮನವಿಯನ್ನು ತಕ್ಷಣ ಜಿಲ್ಲಾಧಿಕಾರಿಗಳಿಗೆ ರವಾನಿಸುತ್ತೇನೆ ಎಂದರು.
ಪಂ. ಎಂ.ಜಿ.ಜೋಶಿ, ಪಂ.ಬಿಂದುಮಾಧವ ಜೋಶಿ, ಪಂ.ಜಯರಾಮಾಚಾರ್ಯ ಮದನಪಲ್ಲಿ, ಸೋನುಪಂತ ಕುಲಕರ್ಣಿ, ಸುಹಾಸ ದಾತಾರ, ಡಾ.ಪಿ.ಪಿ.ಮಿರಜ, ಎನ್.ಕೆ.ಪಾಟೀಲ, ನಾಗೆಶಾಚಾರ್ಯ ಆಯಾಚಿತ, ರಾಜು ಪಾಟೀಲ, ಶ್ರೀರಾಮ ಕಟ್ಟಿ, ಆನಂದ ದೇಶಪಾಂಡೆ, ಸುರೇಶ ಜೋಶಿ, ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ, ಸುಧೀಂದ್ರ ಬಾದರಾಯಣಿ, ಮೋಹನ ಕುಲಕರ್ಣಿ, ವಾದಿರಾಜ ಜಂಬಗಿ ಹಾಗೂ ಸತ್ಯಾತ್ಮತೀರ್ಥ ಸೇನೆ ಕಾರ್ಯಕರ್ತರು ಸೇರಿದಂತೆ ಟೀಕಾಚಾರ್ಯರ ಅಭಿಮಾನಿಗಳು ಉಪಸ್ಥಿತರಿದ್ದರು.