ಅಂಗನವಾಡಿ ಕೇಂದ್ರಗಳಲ್ಲೇ ಎಲ್ಕೆಜಿ, ಯುಕೆಜಿ ಆರಂಭಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಬಳ್ಳಾರಿ 14: ಕಳೆದ ಹಲವಾರು ವರ್ಷಗಳಿಂದ ಮಕ್ಕಳ ಆರೋಗ್ಯ ಪಾಲನೆ ಮತ್ತು ಅಕ್ಷರಾಭ್ಯಾಸದ ಜೊತೆಗೆ ಸರ್ಕಾರದ ಕುಟುಂಬ ಯೋಜನೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕೇಂದ್ರಗಳಲ್ಲಿಯೇ ರಾಜ್ಯ ಸರ್ಕಾರ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
ಎಐಟಿಯುಸಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷೆ ಎಸ್. ಅರ್ಕಾಣಿ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಎಲ್ ಕೆ ಜಿ, ಮತ್ತು ಯುಕೆಜಿ ಪ್ರಾರಂಭಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನ ಆಯ್ಕೆ ಮಾಡಿಕೊಳ್ಳಬೇಕು. ಅಂಗನವಾಡಿ ಬಾಡಿಗೆ ಕಟ್ಟಡಗಳಲ್ಲಿ, ಸ್ವಂತ ಕಟ್ಟಡಗಳಲ್ಲಿ ಎಲ್ ಕೆ ಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಆವಕಾಶ ಕಲ್ಪಿಸಿಕೊಡಬೇಕು. ಮಕ್ಕಳಿಗೆ ಬೇಕಾಗುವ ಸಮವಸ್ತ್ರ, ಶೂ, ಬ್ಯಾಗ್, ಪಠ್ಯಪುಸ್ತಕಗಳನ್ನು ಅಂಗನವಾಡಿಗೆ ಪೂರೈಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳಿಗೆ ಶಿಕ್ಷಣ ಬೋಧಿಸಲು ಹೆಚ್ಚಿನ ತರಬೇತಿಯನ್ನು ನೀಡಬೇಕು. ಎಸ್ಡಿಎಂಸಿ ಯೋಜನೆ ರದ್ದುಪಡಿಸಬೇಕು ಮತ್ತು ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸಬೇಕು. ಈ ಕಾರಣಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಂದಿನಿಂದ ಅನಿರ್ಧಿಷ್ಟಾವಧಿಗೆ ಅಂಗನವಾಡಿಗಳನ್ನು ಬಂದ್ ಮಾಡಿ, ಮೊಬೈಲ್ಗಳಲ್ಲಿ ಪೆೀಷಣ್ ಟ್ರ್ಯಕ್ ಮಾಹಿತಿಗಳನ್ನು ನೀಡದೇ, ಮಾತೃವಂದನಾ, ಭಾಗ್ಯಲಕ್ಷ್ಮಿ, ರೋಗ ನಿರೋಧಕ ಚುಚ್ಚುಮದ್ದು ಕಾರ್ಯಕ್ರಮ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ನಿಲ್ಲಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಏಳು ಜಿಲ್ಲೆಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಸಹ ಹಮ್ಮಿಕೊಳ್ಳಲು ಕರೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಆದೇಶವನ್ನು ಕೈಬಿಡದಿದ್ದರೆ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಂಗಳೂರು ಚಲೋ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಿಂಜರಿಯುವುದಿಲ್ಲ ಎಂದೂ ಈವೇಳೆ ಎಚ್ಚರಿಕೆ ನೀಡಿದರು.
ರಾಜ್ಯ ಶಿಕ್ಷಣ ನೀತಿ ರೂಪಿತವಾಗುವ ಮುನ್ನವೇ ಶಾಲಾ ಶಿಕ್ಷಣ ಇಲಾಖೆಯು ಅಂಗನವಾಡಿಗಳಿಗೆ ತೆರಳಬೇಕಾದ 3 ರಿಂದ 6 ವರ್ಷ ವಯೋಮಾನದ ಮಕ್ಕಳಿಗಾಗಿ ಶಾಲೆಗಳಲ್ಲಿ ಎಲ್.ಕೆ.ಜಿ ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಡುತ್ತಿರುವುದು ಸಮಗ್ರ ಶಿಶು ಅಭಿವೃದ್ಧಿಯಂತಹ ಮಹತ್ವದ ಯೋಜನೆಗೆ ವಿರುದ್ದವಾದ ಪ್ರಕ್ರಿಯೆಯಾಗಿದೆ. ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಾನವನ್ನು 6 ವರ್ಷ ಪೂರ್ಣಗೊಂಡಿರಬೇಕೆಂದು ನಿಗದಿಪಡಿಸಿದೆ. ಇಂತಹ ಸಂದರ್ಭದಲ್ಲಿ ಯಾವ ಶಾಸನಸಭೆಗಳಲ್ಲೂ ಸಹ ಚರ್ಚೆಗೆ ಬಾರದೇ ಇನ್ನೂ ರಾಜ್ಯ ಶಿಕ್ಷಣ ನೀತಿ ರೂಪಿಸಿ ಜಾರಿಗೊಳಿಸುವ ಮುಂಚೆಯೇ ಏಕಪಕ್ಷೀಯವಾಗಿ ಶಾಲೆಗಳಲ್ಲಿ ಎಲ್.ಕೆ.ಜಿ. ಯು.ಕೆ.ಜಿ.ಗಳನ್ನು ಪ್ರಾರಂಭಿಸಿದರೆ ಮಕ್ಕಳ ಬೆಳವಣಿಗೆಯೂ ಕುಂಠಿತಗೊಳ್ಳುವುದರೊಂದಿಗೆ ಅಂಗನವಾಡಿಗಳು ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ವಾಸ್ತವ ಸ್ಥಿತಿಗತಿಗಳನ್ನು ಸರ್ಕಾರದ ಗಮನ ಸೆಳೆದರು. ದೇಶಾದ್ಯಂತ 1975ರಲ್ಲಿ ಪ್ರಾರಂಭವಾಗಿ ಇಲ್ಲಿಗೆ 49 ವರ್ಷಗಳಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ, ಬಾಣಂತಿ ಮತ್ತು ಆರು ತಿಂಗಳಿಂದ ಆರು ವರ್ಷದ ವಯೋಮಾನದ ಮಕ್ಕಳಿಗೆ ಆರೋಗ್ಯ, ಲಾಲನೆ, ಪಾಲನೆ, ಪೆೀಷಣೆ, ಕ್ರೀಡೆ, ಕಲಿಕಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ದೇಶದಲ್ಲಿ 29 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿದ್ದು ರಾಜ್ಯದಲ್ಲಿಯೂ ಸಹ ಸುಮಾರು 70 ಸಾವಿರ ಅಂಗನವಾಡಿ ಕೇಂದ್ರಗಳು ಮಹಿಳೆಯರ, ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಿವೆ. ಸದರಿ ಅಂಗನವಾಡಿ ಕೇಂದ್ರಗಳು ಮತ್ತಷ್ಟು ಬಲವರ್ಧನೆಗೊಳಿಸಿ ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇರುತ್ತದೆ.ಪ್ರಸಕ್ತ ಸಾಲಿನಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿಗಳನ್ನು ನಡೆಸಲು ಆದೇಶ ಜಾರಿಗೊಳಿಸಿದ್ದು, ಇದನ್ನು ಖಂಡಿಸಿ ಕಲಬುರಗಿಯಲ್ಲಿ ಸಹೋದರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಇದೇ ಜೂನ್ 3ರಂದು ಈ ಆದೇಶವನ್ನು ತಡೆಹಿಡಿಯಲಾಗಿತ್ತು. ಇದನ್ನು ಏಕಾಏಕೀ ಪುನಃ ಆದೇಶ ಜಾರಿಗೊಳಿಸಿ ರಾಜ್ಯ ಸರ್ಕಾರ ನಿಗದಿಪಡಿಸಿದ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಬೇಕೆಂದು ಆದೇಶ ಹೊರಡಿಸಲಾಗಿರುತ್ತದೆ. ಇದರಿಂದ ಅಂಗನವಾಡಿಗಳನ್ನು ಮೊಟಕುಗೊಳಿಸುವ ಹುನ್ನಾರ ಎದ್ದು ಕಾಣುತ್ತಿದೆ. ಇದನ್ನು ಸಹಿಸಿಕೊಂಡು ನಾವು ಸುಮ್ಮನಿರುವುದಿಲ್ಲ. ಕಾನೂನಾತ್ಮಕವಾದ ಹೋರಾಟಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಏಕಾಏಕಿ ಎಲ್.ಕೆ.ಜಿ. ಮತ್ತು ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿಗಳನ್ನು ನಡೆಸಲು ಆದೇಶ ಜಾರಿಗೊಳಿಸಿರುವುದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಂಗನವಾಡಿಗಳನ್ನು ಬಂದ್ ಮಾಡಿ ಇಂದಿನಿಂದ ಅನಿರ್ಧಿಷ್ಟಾವಧಿಗೆ ಬೃಹತ್ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಾನೂನು ಸಲಹೆಗಾರರದ ಎಆರ್ಎಂ ಇಸ್ಮಾಯಿಲ್, ಎಐಟಿಯುಸಿ ಅಧ್ಯಕ್ಷರಾದ ಹೆಚ್.ಎ.ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಇ.ಮಂಗಮ್ಮ, ಜಿಲ್ಲೆ ಮತ್ತು ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಎರೆಮ್ಮ, ಸೌಭಾಗ್ಯ, ಟಿ.ಇಂದಿರಾ, ನಾಗರತ್ನಮ್ಮ, ಪಿ.ಕವಿತಾ, ಪಿ.ಡಿ.ಮೀನಾಕುಮಾರಿ, ಬಿ.ಕೆ.ಶಾರದಾ, ಸ್ವರೂಪರಾಣಿ, ರತ್ನಮ್ಮ, ಪಿ.ಕಲಾವತಿ, ಮಂಗಳಗೌರಿ, ಶಿವಗಂಗಮ್ಮ, ಪಿ.ಸತ್ಯಸಾವಿತ್ರಿ, ಟಿ.ಪುಷ್ಪಾವತಿ, ಜ್ಯೋತಿ, ಈರಮ್ಮ, ಕುಮಾರಿ, ಪದ್ಮಾವತಿ, ಜಮೇಲಾ, ಗಂಗಮ್ಮ, ರೇಣುಕಾ, ಗೋವಿಂದಮ್ಮ, ಸುನೀತಾ, ಕೊಂಡಮ್ಮ, ಮಾರ್ಗರೇಟ್, ಶಕುಂತಲಾ .ಬಿ .ಕೆ., ವೀಣಾ, ಜಗದೀಶ್ವರಿ, ಈರಮ್ಮ ಹಿರೇಮಠ, ಮಮತಾ, ಪದ್ಮ, ನೀಲಮ್ಮ ಇನ್ನಿತರರು ಇದ್ದರು.