ಅಥಣಿ

ಕ್ಲಸ್ಟರ್ ಮಟ್ಟದ ಕಲಿ ಹಬ್ಬ ಉದ್ಘಾಟನೆ

ಕ್ಲಸ್ಟರ್ ಮಟ್ಟದ ಕಲಿ ಹಬ್ಬ ಉದ್ಘಾಟನೆ

ಅಥಣಿ 19:  ಶಾಲಾ ಕೊಠಡಿಗಳಿಗಿಂತ ಶಾಲಾ ಮೈದಾನದಲ್ಲಿಯೇ ಮಕ್ಕಳ ಪ್ರತಿಭೆ ಗುರುತಿಸಲು ಸಾಧ್ಯ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಅವರು ತಾಂವಶಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಸಂಬರಗಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.  

ಕೊಠಡಿಗಳಲ್ಲಿ ಶಿಕ್ಷಕರು ಮಕ್ಕಳಿಗೆ ಕೇವಲ ಪಠ್ಯಾನುಸಾರ ಶಿಕ್ಷಣ ನೀಡಲು ಸಾಧ್ಯ ಆದರೆ ಮಕ್ಕಳಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿಯೇ ಕಲಿ ಹಬ್ಬದಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ಸರಕಾರ ಶಿಕ್ಷಣ ಇಲಾಖೆ ಮೂಲಕ ಆಯೋಜಿಸಿಸುತ್ತಿದೆ ಎಂದರು. ಕಲಿ ಹಬ್ಬದಲ್ಲಿ ಮಕ್ಕಳ ಪ್ರತಿಭೆ ಗುರುತಿಸಲು ಅವಕಾಶ ಕಲ್ಪಿಸಲಾಗಿದ್ದು, ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.  

ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಶಾಲಾ ಸಮಯ ಮುಗಿದ ನಂತರ ಪಾಲಕರೊಂದಿಗೆ ಕೃಷಿ, ಹೈನುಗಾರಿಕೆಯಲ್ಲಿ ಕೈ ಜೋಡಿಸುತ್ತಾರೆ ಜೊತೆಗೆ ಕಲಿಕೆಯಲ್ಲಿಯೂ ಕೂಡ ಉತ್ತಮರಾಗಿರುತ್ತಾರೆ ಇದು ನಮ್ಮ ವಿದ್ಯಾರ್ಥಿಗಳ ಹೆಮ್ಮೆ ಇದೇ ರೀತಿ  ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕೂಡ ವಿದ್ಯಾರ್ಥಿ ಜೀವನದಲ್ಲಿ ಶಾಲಾ ಸಮಯದ ನಂತರ ತಮ್ಮ ತಂದೆಯ ಜೊತೆಗೆ ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದರು ಜೊತೆಗೆ ಶಾಲೆಯಲ್ಲಿಯೂ ಪ್ರತಿಭಾವಂತರಾಗಿದ್ದರು ಇಂತಹ ನಾಯಕರು ನಮ್ಮ ವಿದ್ಯಾರ್ಥಿಗಳಿಗೆ ಮಾದರಿ ಎಂದರು.  

 ನಮ್ಮ ರಾಷ್ಟ್ರಗೀತೆ ರಚನಾಕಾರ ನೊಬೇಲ್ ಪುರಸಕೃತ ರವೀಂದ್ರನಾಥ ಟ್ಯಾಗೋರ್ ಕೂಡ ಶಾಂತಿ ನಿಕೇತನ ಹೆಸರಿನ ಶಾಲೆಯೊಂದು ಪ್ರಾರಂಭಿಸಿದ್ದರು. ಇಲ್ಲಿ ಕೊಠಗಿಂತ ಹೆಚ್ಚು ನಿಸರ್ಗದ ಬಯಲಿನಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ಮಕ್ಕಳಿಗೆ ಕೃಷಿ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳ ಪರಿಚಯ ಮಾಡಿಕೊಟ್ಟಾಗ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದ ಅವರು ನಾನು 6 ನೇ ತರಗತಿಯಲ್ಲಿದ್ದಾಗ ಒಂದು ಗುಂಟೆ ಜಾಗದಲ್ಲಿ ಗೋಧಿ ಬೆಳೆದಿದ್ದೆ ಮುಂದೆ ಆ ಗೋಧಿಯಿಂದ ಉಪ್ಪಿಟ್ಟು ಮಾಡಿ ಇಡೀ ಕುಟುಂಬ ಸವಿದಿರುವ ಘಟನೆ ಇಂದಿಗೂ ಪ್ರೇರಣೆಯಾಗಿದೆ ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಸಿ.ಆರ್‌.ಪಿ ಗಂಗಾಧರ ಕೋಷ್ಟಿ, ಶಿಕ್ಷಣ ಸಂಯೋಜಕ ಶ್ರೀಶೈಲ ಸನದಿ, ನೋಡಲ್ ಅಧಿಕಾರಿ ಎಸ್‌.ಎಸ್‌.ನಾಯಕ, ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ರಾಮಗೌಡ ಪಾಟೀಲ, ಬಿಜೆಪಿ ಧುರೀಣರಾದ ಮಹಾದೇವ ಮೇತ್ರಿ, ಆರ್‌.ಎಮ್‌.ಪಾಟೀಲ, ಅಬ್ದುಲ್ ಮುಲ್ಲಾ, ಬಸಗೌಡ ಪಾಟೀಲ, ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಮಲಕಪ್ಪ ಬಿಳ್ಳೂರ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಎಸ್‌.ಡಿ.ಎಮ್‌.ಸಿ ಸದಸ್ಯರು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶಾಸಕ ಶ್ರೀಮಂತ ಪಾಟೀಲ ಇವರನ್ನು ಕುದುರೆ ಕುಣಿತ, ಕರಡಿ ಮಜಲಿನ ಮೂಲಕ ಬರಮಾಡಿಕೊಳ್ಳಲಾಯಿತು. 


ಸುದ್ದಿ ಓದಿ