ಯೋಗದ ದಾಸರಾದಲ್ಲಿ ಆರೋಗ್ಯಪೂರ್ಣ ಜೀವನ: ಬೆಳವಡಿ
ಬೈಲಹೊಂಗಲ 22: ಇಂದಿನ ದಿನಗಳಲ್ಲಿ ಬಿಡುವಿಲ್ಲದ ಜೀವನ ಶೈಲಿಯಿಂದ ಎಲ್ಲರೂ ಮಾನಸಿಕ ಒತ್ತಡಕ್ಕೊಳಗಾಗಿ ಶಾರೀರೀಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುವುದಲ್ಲದೆ ಅನೇಕ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕ ಉಲ್ಲಾಸವುಳ್ಳ ಆರೋಗ್ಯಪೂರ್ಣ ಜೀವನಕ್ಕೆ ಪ್ರತಿಯೊಬ್ಬರೂ ಯೋಗದ ದಾಸರಾಗಿ ನಿತ್ಯವೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಯೋಗ ಶಿಕ್ಷಕ ಜಿ.ಸಿ.ಬೆಳವಡಿ ಹೇಳಿದರು.
ವಿಶ್ವ ಯೋಗ ದಿನಾಚರಣೆ ನಿಮಿತ್ತ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ವೀರಭದ್ರೇಶ್ವರ ಗುರುಕುಲ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ದೆಸೆಯಿಂದಲೆ ಯೋಗದ ಮಹತ್ವ ಅರಿತು ಕರಗತ ಮಾಡಿಕೊಂಡರೆ ಯಾವುದೇ ರೋಗ ರುಜಿನಗಳು ಬರದಂತೆ ದೈಹಿಕ ಸದೃಢತೆ ಪಡೆಯಬುಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜಿ.ಸಿ.ಬೆಳವಡಿಯವರಿಂದ ಯೋಗ ತರಬೇತಿ ಪಡೆದ ಯೋಗ ಪಟುಗಳಾದ ತನುಶ್ರೀ ಸಂಗೊಳ್ಳಿ, ಲಕ್ಷ್ಮೀ ಕುಡವಕ್ಕಲಗಿ ಯೋಗಾಸನದ ವಿವಿಧ ಭಂಗಿಗಳ ಅದ್ಭುತ ಪ್ರದರ್ಶನ ನೀಡಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಶಾಂತಿನಗರ ಬಡಾವಣೆ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಾದ ಎಮ್.ಎಸ್.ಪಾಟೀಲ, ಆರ್.ವಿ.ಪರ್ವತಗೌಡರ, ಎಸ್.ವಿ.ಭಜಂತ್ರಿ ಸೇರಿದಂತೆ ವೀರಭದ್ರೇಶ್ವರ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕ, ಶಿಕ್ಷಕಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.