ಆರೋಗ್ಯವೇ ನಮ್ಮ ಸಂಪತ್ತು: ಸೋಮಸೇಖರ ಮುತ್ನಾಳ
ಬೈಲಹೊಂಗಲ 22: ಆರೋಗ್ಯವೇ ನಮ್ಮ ಸಂಪತ್ತು ಆಗಬೇಕು. ಈ ಹಿನ್ನೆಲೆಯಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸೋಮಸೇಖರ ಮುತ್ನಾಳ ಹೇಳಿದರು.
ಪಟ್ಟಣದ ದೇವಲಾಪುರ ರಸ್ತೆಯ ಆಶ್ರಯ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸೊಳ್ಳೆಗಳ ಕಡಿತದಿಂದ ಹಲವು ಮಾರಕ ರೋಗಗಳು ಹರಡುತ್ತಿವೆ ಹೀಗಾಗಿ ಸೊಳ್ಳೆಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಸೊಳ್ಳೆ ಪರದೆ ತಪ್ಪದೆ ಉಪಯೋಗಿಸಬೇಕು. ಸ್ವಚ್ಛತೆಯಿಂದ ಸೊಳ್ಳೆಗಳ ಉತ್ಪತ್ತಿ ತಡೆಯಬಹುದು. ಮನೆಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳುವ ಜತೆಗೆ ನೀರಿನ ತೊಟ್ಟಿ, ನೀರು ಸಂಗ್ರಹ ಸ್ಥಳ ಸ್ವಚ್ಛ ಮಾಡಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ ಎಂದರು.
ತಾಲೂಕಾ ಹಿರಿಯ ನೀರೀಕ್ಷಣಾಧಿಕಾರಿ ನಾಗರಾಜ ಖಾಡೆ, ಗೌರಮ್ಮ ಹಂಪಿಹೊಳಿ, ಸಾವಿತ್ರಿ ಮಾಳೋದೆ, ಸುಮಯ್ಯ ಚಿಪ್ಪಲಕಟ್ಟಿ, ತಸಮಿಯಾ ಬಾನು ಮಿರ್ಜಿ ಅಂಗನವಾಡಿ ಕಾರ್ಯಕರ್ತೆಯರು, ಕಾಲೋನಿ ನಿವಾಸಿಗಳು ಇದ್ದರು. ಗರ್ಭಿಣಿ, ಭಾಣಂತಿ ಹಾಗೂ ಮಕ್ಕಳ ಉಪಯೋಗಕ್ಕೆ ಅಂಗನವಾಡಿಗೆ ಮಿಕ್ಸರ ಸೆಟ್ ನ್ನು ಕೊಡುಗೆಯಾಗಿ ನೀಡಲಾಯಿತು.