ಗುರುವಂದನೆ: ಗುರುವಿನ ಮೆರವಣಿಗೆ ತುಲಾಭಾರ
ರಾಣೀಬೆನ್ನೂರು 06: ನಗರದಲ್ಲಿ ಗುರುಪೂರ್ಣಿಮೆಯೆಂದು ಗುರುವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿ ತುಲಾಬಾರ ನೆರವೇರಿಸಿ, ಗುರುವಂದನೆ ಸಲ್ಲಿಸಿದ ವೈಶಿಷ್ಟಪೂರ್ಣ ಕಾರ್ಯಕ್ರಮ ಜರುಗಿದೆ. ಈ ಭಕ್ತಿಪೂರ್ವಕ ಸಮಾರಂಭವನ್ನು ಉದ್ದೇಶಿಸಿ ಅರಕೆರೆ ಗ್ರಾಮದ ಪೂಜ್ಯ ಶ್ರೀಮನಿಪ್ರ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿ ಗುರುಸರ್ವೋತ್ತಮನಾದ ವ್ಯಕ್ತಿಗುರುವಿಗೆ ಸರಿಸಾಟಿಯಾಗುವವರು ಯಾರೂ ಇಲ್ಲ, ಗುರುವಿಗೆ ಹರನನ್ನು ಸೋಲಿಸುವ ಶಕ್ತಿಯಿದೆ. ಪ್ರತಿಯೊಬ್ಬ ನರನಿಂದ ಹಿಡಿದು ಹರನಿಗೂ ಸಹ ಗುರುವಿದ್ದಾನೆ. ಶ್ರೀ ರಾಮನಿಗೆ ವೈಶಿಷ್ಟಮುನಿ ಗುರುಗಳಿದ್ದರು ಹೀಗೆ ಎಲ್ಲರಿಗೂ ಗುರು ಸರ್ವಶ್ರೇಷ್ಠನಾಗಿದ್ದಾನೆ. ವೀರಶೈವ ಧರ್ಮದಲ್ಲಿ ಗರ್ಭಾವಸ್ಥೆಯಲ್ಲೇ ಗುರುವಿನಿಂದ ಲಿಂಗದಾರಣಾ ಪದ್ಧತಿಯಿದೆ ಎಂದು ಅವರು ನುಡಿದರು.
ಅವರು ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಬಸವೇಶ್ವರ ದೇವಸ್ಥಾನದಿಂದ ಕೊಟ್ಟೂರೇಶ್ವರ ಮಠದವರೆಗೆ ಬೆಳ್ಳಿರಥದಲ್ಲಿ ಸಮಾಳ-ಪುರವಂತಿಕೆ ಮೇಳದೊಂದಿಗೆ ಮೆರವಣಿಗೆ ನಡೆದು ಶ್ರೀ ಮಠದಲ್ಲಿ ಶ್ರೀಗಳ 80ನೇ ಜನ್ಮದಿನೋತ್ಸವದ ಅಂಗವಾಗಿ ತುಲಾಬಾರ ಹಾಗೂ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿ, ನಾಡಿನಲ್ಲಿ ಮಳೆ ಬಾರದೇ ಬರದ ವಾತಾವರಣದಿಂದ ರೈತ ಕಂಗಾಲಾಗಿದ್ದಾನೆ. ಶೀಘ್ರದಲ್ಲಿ ಸಕಾಲಕ್ಕೆ ಯೋಗ್ಯ ಮಳೆಯಾಗಿ ಕೆರೆ ಕಟ್ಟೆ-ಡ್ಯಾಮ್ ತುಂಬಿ ಸಮೃದ್ಧ ಬೆಳೆ ಬಂದು ನಾಡಿನ ಜನತೆ ಸಮೃದ್ಧಿಹೊಂದಲೆಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ವಿಶ್ವನಾಥ ಆರ್. ಅಜ್ಜೆವಾಡಿಮಠ ಕುಟುಂಬದವರು ಗುರುವಂದನಾ ಸಮಿತಿಯ ಬಿದ್ದಾಡೆಪ್ಪ ಚಕ್ರಸಾಲಿ, ಕೊಟ್ಟೂರೇಶ್ವರ ಮಠದ ಸಮಿತಿಯವರು ಅರ್ಚಕರ ಸಂಘದ ಶಾಂತವೀರಯ್ಯ ಹಾಲಾರಾಜ್ಯ ಶಾಸ್ತ್ರಿ, ಅರಕೆರೆ ಗ್ರಾಮದ ಗ್ರಾಮಸ್ಥರು ಹಾಗೂ ಭಕ್ತವೃಂದದವರು ಪೂಜ್ಯ ಶಿವಲಿಂಗ ಶ್ರೀಗಳ ಪಾದಪೂಜೆ ನೆರವೇರಿಸಿ ತುಲಾಬಾರ ಮಾಡಿ ಗುರುವಂದನೆ ಸಲ್ಲಿಸಿದರು.