ಪಂಚಮಸಾಲಿ ಸಮಾಜದ ನಾಲ್ಕು ಜನರಿಗೆ ಸಚಿವ ಸ್ಥಾನ ನೀಡಿ: ಬಿರಾದರ
ಇಂಡಿ 22: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ದೊರಕಿಸಿಕೊಡಲು ನಿರಂತರ ಹೋರಾಟ ಮಾಡಿದ ವಿಜಯಾನಂದ ಕಾಶಪ್ಪನವರ, ವಿನಯ್ ಕುಲಕರ್ಣಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡಲೇಬೇಕು ಎಂದು ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಮಶೇಖರ ದೇವರ ಹಾಗೂ ಇಂಡಿ ತಾಲೂಕ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ ಹೆಚ್ ಬಿರಾದರ ಆಗ್ರಹಿಸಿದರು.
ಸೋಮವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಪಂಚಮಸಾಲಿ ಸಮಾಜದ ಕೊಡುಗೆ ಬಹಳಷ್ಟು ಇದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪಂಚಮಸಾಲಿ ಸಮಾಜ ಮತದಾನ ಮಾಡಿದೆ. ಸಮಾಜದ ಋಣ ತೀರಿಸಲು ಕಾಂಗ್ರೆಸ್ ಮುಖಂಡರು ಕಡ್ಡಾಯವಾಗಿ ಪಂಚಮಸಾಲಿ ಸಮಾಜದ ನಾಲ್ಕು ಜನರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಗ್ರಹಿಸಿದರು.
ಬಿಜೆಪಿ ಪಕ್ಷ ಮೀಸಲಾತಿ ನೀಡುವಲ್ಲಿ ವಿಳಂಬ ಮಾಡಿದ್ದು, ಹಾಗೂ 2ಡಿ ಎಂಬ ಹೊಸ ಕೆಟ್ಟಗರಿ ಸೃಷ್ಟಿಸಿ ಸಮಾಜಕ್ಕೆ ಹೆಚ್ಚಿನ ಮೀಸಲಾತಿ ನೀಡದೇ ಇರುವುದು ಪಂಚಮಸಾಲಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಈ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಇಂತಹ ತಪ್ಪನ್ನು ಕಾಂಗ್ರೆಸ್ ಪಕ್ಷ ಮಾಡದೆ ಲಿಂಗಾಯಿತರಲಿಯೇ ಅತಿ ಪ್ರಬಲ ಸಮುದಾಯವಾದ ಪಂಚಮಸಾಲಿ ಸಮಾಜಕ್ಕೆ ಕನಿಷ್ಠ ನಾಲ್ಕು ಜನರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಶಿವಾನಂದ ಚಳಿಕಾರ, ಅನಿಲಗೌಡ ಬಿರಾದಾರ, ಬಾಳು ಮುಳಜಿ, ಅಶೋಕಗೌಡ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.