ಮಕ್ಕಳ ಸುರಕ್ಷತೆಗಾಗಿ ಸರಕಾರಿ ಫಲಾನುಭವಿಗಳಿಂದ ಭದ್ಧತಾ ಘೋಷಣೆ ಪ್ರಮಾಣ ಪತ್ರ ಪಡೆಯಿರಿ: ತಪ್ಪಿದಲ್ಲಿ ಬಡ್ಡಿ ಸಹಿತ ಕಾನೂನಾತ್ಮಕವಾಗಿ ಸೌಲಭ್ಯ: ಶೇಖರಗೌಡ ರಾಮತ್ನಾಳ
ಧಾರವಾಡ 25 : ಪ್ರತಿ ಕುಟುಂಬ ತಮ್ಮ ಕುಟುಂಬದ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಅವರ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿದಂತೆ ವಿವಿಧ ಇಲಾಖೆ, ನಿಗಮಗಳಿಂದ ವಿವಿಧ ಸಹಾಯಧನ, ಸೌಲಭ್ಯ ಪಡೆಯುವ ಪ್ರತಿ ಫಲಾನುಭವಿಯಿಂದ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಕುರಿತು ಬದ್ಧತಾ ಘೋಷಣೆಯ ಪ್ರಮಾಣ ಪತ್ರ ಪಡೆದು, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅವರು ಹೇಳಿದರು.
ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಭಾಗಿದಾರರೊಂದಿಗೆ ಸಮಾಲೋಚನೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಹಲವು ಮಕ್ಕಳ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂದಿನ ಮಕ್ಕಳಿಗೆ ಅವರ ಕುಟುಂಬದಲ್ಲಿಯೇ ರಕ್ಷಣೆ ಇಲ್ಲದಿರುವ ಮನೋಭಾವವಿದೆ. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಪರಿಚಯಸ್ಥರಿಂದಲೇ ಮಕ್ಕಳ ಮೇಲೆ ದೌರ್ಜನ್ಯವಾಗಿರುವ ಪ್ರಕರಣಗಳಿವೆ. ಸರಕಾರ, ಸಂಸ್ಥೆ, ಆಯೋಗ, ಪೊಲೀಸ್ ಸೇರಿ ಎಲ್ಲ ಇಲಾಖೆಗಳು ಕಾನೂನಾತ್ಮಕವಾಗಿ ಮಕ್ಕಳ ರಕ್ಷಣೆ ಹಾಗೂ ಅವರಿಗೆ ಉತ್ತಮ ವಾತಾವರಣ ಕಲ್ಪಿಸಲು ಶ್ರಮಿಸಿದರೂ ಯಶ ಕಾಣುತ್ತಿಲ್ಲ. ಹೆಚ್ಚುತ್ತಿರುವ ಮಕ್ಕಳ ಪ್ರಕರಣಗಳು ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.
ಮಕ್ಕಳ ರಕ್ಷಣೆಯಲ್ಲಿ ತಂದೆ-ತಾಯಿ, ಪಾಲಕರ ಪಾತ್ರ ಮಹತ್ವದ್ದಾಗಿದ್ದು, ಅವರಿಂದ ಬದ್ಧತಾ ಪ್ರಮಾಣ ಪತ್ರ ಪಡೆಯುವ ಮೂಲಕ ಅವರನ್ನು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜವಾಬ್ದಾರರನ್ನಾಗಿ ಮಾಡಬೇಕೆಂದು ಅವರು ತಿಳಿಸಿದರು.
ಅಸಭ್ಯ ವರ್ತನೆ ತೋರಿದ ಶಿಕ್ಷಕನ ಮೇಲೆ ಎಫ್.ಐ.ಆರ್ : ಕಳೆದ ಜುಲೈ 23 ರಂದು ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಸರಕಾರಿ ಪ್ರೌಢಶಾಲೆ ಹತ್ತನೆ ವರ್ಗದ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿ, ಬೆದರಿಕೆ ಹಾಕಿದ ಶಿಕ್ಷಕನ ವಿರುದ್ಧ ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನ 24 ಘಂಟೆಯಲ್ಲಿ ಎಫ್.ಐ.ಆರ್ ದಾಖಲಿಸಬೇಕೆಂದು ಶೇಖರಗೌಡ ರಾಮತ್ನಾಳ ಅವರು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರೀಶೀಲನೆ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ತನ್ನದೆ ಶಾಲೆಯಲ್ಲಿ 10ನೇ ವರ್ಗದ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿ, ಆ ಮಗುವಿಗೆ ಬೆದರಿಕೆ ಹಾಕಿದ್ದು ಅಕ್ಷಮ್ಯ ಅಪರಾಧ. ಶಿಕ್ಷಕನಿಗೆ ಸಸ್ಪೆಂಡ್ ಮಾಡಿರುವ ಶಿಕ್ಷೆ ಸಾಲದು; ಅವನ ವಿರುದ್ಧ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಮುಂದಿನ 24 ಗಂಟೆಯಲ್ಲಿ ಎಫ್.ಐ.ಆರ್. ದಾಖಲಿಸಿ, ವರದಿ ನೀಡಬೇಕು. ಇಲ್ಲದಿದ್ದಲ್ಲಿ ದೌರ್ಜನ್ಯ ವೆಸಗಿದ ಶಿಕ್ಷಕ, ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಮಕ್ಕಳ ರಕ್ಷಣಾ ಆಯೋಗವೇ ಎಫ್.ಐ.ಆರ್ ದಾಖಲಿಸುತ್ತದೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಘಟನೆ ಸಂಬಂಧ ತುರ್ತಾಗಿ ಅಗತ್ಯ ಕಾನೂನಾತ್ಮ ಕ್ರಮ ವಹಿಸದಿರುವ ಕುರಿತು ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಕ್ರಮಕೈಗೊಳ್ಳುತ್ತದೆ ಎಂದು ಶೇಖರಗೌಡ ಅವರು ಎಚ್ಚರಿಕೆ ನೀಡಿದರು.
ಮಕ್ಕಳ ಸಹಾಯವಾಣಿಗಾಗಿ ಶಾಶ್ವತ ಫಲಕ : ಶಾಲಾ ಮಕ್ಕಳಿಗೆ ತೊಂದರೆ ಉಂಟಾದಾಗ ಅಥವಾ ಇತರ ಮಕ್ಕಳ ಹಕ್ಕುಗಳಿಗೆ ದಕ್ಕೆ ಬಂದಾಗ ತಕ್ಷಣ ಸಹಾಯಕ್ಕೆ ಬರುವುದು ಮಕ್ಕಳ ಸಹಾಯವಾಣಿ 1098. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಈ ಕುರಿತು ಮಕ್ಕಳಿಗೆ ಸರಿಯಾದ ತಿಳುವಳಿಕೆ, ಪ್ರಚಾರ ನೀಡುತ್ತಿಲ್ಲವೆಂದು ಅವರು ಹೇಳಿದರು.
ಪ್ರತಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ನಮೂದಿಸಿರುವ ಶಾಶ್ವತ ಫಲಕಗಳನ್ನು ಅಳವಡಿಸಬೇಕೆಂದು ಸೂಚಿಸಿದರು. ಅನಧಿಕೃತ ಶಾಲೆ, ಕೊಚಿಂಗ್ ಸೆಂಟರ್ ಸೀಜ್ ಮಾಡಿ : ಜಿಲ್ಲೆಯಲ್ಲಿ ಹಲವಾರು ಅನಧಿಕೃತ ಶಾಲೆ ಹಾಗೂ ಅನಧಿಕೃತ ಶಾಲಾ ಕೊಚಿಂಗ್ ಕೇಂದ್ರಗಳು ನಡೆಯುತ್ತಿವೆ. ಬಿಇಓ ಸೇರಿದಂತೆ ಯಾವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ನಿನ್ನೆ ನವಲಗುಂದದಲ್ಲಿ ಪರೀಶೀಲನೆ ಸಮಯದಲ್ಲಿ ವಿದ್ಯಾಜ್ಯೋತಿ ಎಂಬ ಅನಧಿಕೃತ ಶಾಲೆಗೆ ಭೇಟಿ ನೀಡಿದಾಗ ಸುಮಾರು 65 ಕ್ಕೂ ಹೆಚ್ಚು ಮಕ್ಕಳು ಬೇರೆ ಜಿಲ್ಲೆ ಹಾಗೂ ಇದೇ ಜಿಲ್ಲೆಯ ಅಧಿಕೃತ ಶಾಲೆಯ ಮಕ್ಕಳು ಕಂಡು ಬಂದರು. ವಿದ್ಯಾಜ್ಯೋತಿ ಶಾಲೆಯೇ ಅನಧಿಕೃತ, ಅಲ್ಲಿ ಅರ್ಹತೆ ಇರುವ ಶಿಕ್ಷಕರಿಲ್ಲ, ಶೌಚಾಲಯ ಇಲ್ಲ, ಶುಚಿತ್ವವಿರುವ ಕೊಠಡಿಗಳಿಲ್ಲ. ಆದರೂ ಮಕ್ಕಳಿದ್ದಾರೆ. ಇದಕ್ಕೆ ಅಲ್ಲಿನ ಸಿಆರ್ಪಿ, ಬಿಆರ್ಪಿ, ಬಿಇಓ ಅವರನ್ನು ಜವಾಬ್ದಾರರನ್ನಾಗಿ ಕ್ರಮ ಜರುಗಿಸಬೇಕು ಮತ್ತು ಮುಂದಿನ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಅನಧಿಕೃತ ಶಾಲೆ, ಕೊಚಿಂಗ್ ಸೆಂಟರ್ಗಳು ಸೀಜ್ ಆಗಬೇಕು. ಈ ಕುರಿತ ವರದಿಯನ್ನು ಒಂದು ತಿಂಗಳೊಳಗಾಗಿ ಸಲ್ಲಿಸಬೇಕೆಂದು ಡಿಡಿಪಿಐ ಅವರಿಗೆ ಆಯೋಗ ಸದಸ್ಯರು ನಿರ್ದೇಶನ ನೀಡಿದರು.
ಶಾಲೆಗಳಲ್ಲಿ ಸಲಹಾ ಪೆಟ್ಟಿಗೆ, ಸಿಸಿ ಕ್ಯಾಮರಾ ಕಡ್ಡಾಯ ಮಾಡಿ : ಪ್ರತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಮತ್ತು ಯಾವುದೇ ಭಯ, ಆತಂಕ ಇಲ್ಲದೆ ತಮ್ಮ ನೋವು, ತೊಂದರೆ, ಅಭಿಪ್ರಾಯಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಶಾಲೆಯ ಒಂದು ಭಾಗದಲ್ಲಿ ಸಲಹಾ ಪೆಟ್ಟಿಗೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಈ ಸಲಹಾ ಪೆಟ್ಟಿಗೆ ಪ್ರಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು. ಈ ಕುರಿತು ಸುತ್ತೋಲೆಯನ್ನು ಇಲಾಖೆ ಹೊರಡಿಸಬೇಕೆಂದು ಅವರು ತಿಳಿಸಿದರು.
ಬಾಲಗರ್ಭಿಣಿಯರ ಬಗ್ಗೆ ಎಚ್ಚರಿಕೆ ವಹಿಸಿ : ವಯಸ್ಕರಾಗದ ಅನೇಕ ಹೆಣ್ಣು ಮಕ್ಕಳು ಗರ್ಭಿಣೀಯರಾಗಿರುತ್ತಿರುವ ಕುರಿತು ಪ್ರಕರಣ, ವರದಿ ಪ್ರಕಟವಾಗುತ್ತಿವೆ. ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಈ ಸಮಸ್ಯೆ ತೊಲಗಿಸಲು ಪ್ರಯತ್ನಿಸಬೇಕು. ಪ್ರಕರಣ ಗಮನಕ್ಕೆ ಬಂದ ತಕ್ಷಣ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಸದಸ್ಯರು ಸೂಚಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ಜಾಗೃತಿ ಹೆಚ್ಚಿಸಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಇತರ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ 2006, ಮಕ್ಕಳ ಸಹಾಯವಾಣಿ 1098, ಮಕ್ಕಳ ಹಕ್ಕುಗಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಕಾರದಲ್ಲಿ ಮಕ್ಕಳ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಅವರು ತಿಳಿಸಿದರು.
ಸ್ಕ್ಯಾನಿಂಗ್ ಸೆಂಟರ್, ಶ್ಯಾಮ ಚಿಲ್ಡ್ರೆನ್ಗಳ ಬಗ್ಗೆ ಜಾಗೃತಿ ವಹಿಸಿ : ಇತ್ತಿಚೆಗೆ ಸ್ಕ್ಯಾನಿಂಗ್ ಸೆಂಟರ್ಗಳ ದುರ್ಬಳಕೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ನಿರಂತರ ಪರೀಶೀಲನೆ ಕೈಗೊಳ್ಳಬೇಕು. ಸ್ಕ್ಯಾನಿಂಗ್ ದಾಖಲಾತಿಗಳನ್ನು ಪರೀಶೀಲಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸೇರಿ ಜಿಲ್ಲೆಯಲ್ಲಿರುವ 157 ಶ್ಯಾಮ ಚಿಲ್ಡ್ರೆನ್ಗಳನ್ನು ಸರಿಯಾದ ಆಹಾರ, ಜೌಷಧಿ ನೀಡಿ ಗುಣಮುಖರನ್ನಾಗಿಸಬೇಕೆಂದು ಶೇಖರಗೌಡ ಅವರು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ಸಂಘಟಿಸಲಾಗುತ್ತಿದೆ. ಗ್ರಂಥಾಲಯ ಸೇರಿ ವಿಶೇಷ ಸೌಲಭ್ಯಗಳನ್ನು ಮಕ್ಕಳಿಗೆ ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮಕ್ಕಳ ರಕ್ಷಣಾ ಆಯೋಗ ಗುರುತಿಸಿರುವ ಎಲ್ಲ ಕೊರತೆಗಳನ್ನು ಶೀಘ್ರದಲ್ಲಿ ಕ್ರಮವಹಿಸಿ, ಪರಿಹರಿಸಲಾಗುತ್ತದೆ. ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಗ್ರಾಮ ಪಂಚಾಯತಿಗಳಲ್ಲಿನ ಗ್ರಾಮ ಸಮಿತಿಗಳನ್ನು ಬಲಪಡಿಸಲಾಗುತ್ತದೆ ಎಂದು ಸಿಇಓ ಸ್ವರೂಪ ಟಿ.ಕೆ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್.ದೊಡ್ಡಮನಿ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ಜಾಗೃತಿ ಹಾಗೂ ಅವರಲ್ಲಿ ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ, ಮಹಿಳೆಯರಿಗೆ ನಿರಂತರವಾಗಿ ಕಾನೂನುಗಳ ಅರಿವು-ನೆರವು ನೀಡಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಕ್ಷೇತ್ರಕಾರ್ಯದಲ್ಲಿ ಮಕ್ಕಳ ಸಮಸ್ಯೆಗಳನ್ನು ಗುರುತಿಸಿ, ದಾಖಲಿಸಬೇಕೆಂದು ಅವರು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ಕೃಷಿ ಇಲಾಖೆ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಶಿಕ್ಷಣ ಇಲಾಖೆ ಡಿವೈಪಿಸಿ ಗೀರೀಶ ಮಠಪತಿ, ಕಾರ್ಮಿಕ ಇಲಾಖೆ ಅಧಿಕಾರಿ ಮಾರಿಕಾಂಬಾ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಜಗದೀಶ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿರುವ ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ, ತಮ್ಮ ಇಲಾಖೆಗಳ ಪ್ರಗತಿ ವರದಿ ಸಲ್ಲಿಸಿದರು.