ಧಾರವಾಡ - ಹುಬ್ಬಳ್ಳಿ

ಹಾನಿಯಾದ 127 ಮನೆಗಳಿಗೆ ಪರಿಹಾರ ವಿತರಣೆಗೆ ಕ್ರಮ : ಜಿಲ್ಲಾಧಿಕಾರಿ ದಿವ್ಯ ಪ್ರಭು

ಹಾನಿಯಾದ 127 ಮನೆಗಳಿಗೆ ಪರಿಹಾರ ವಿತರಣೆಗೆ ಕ್ರಮ : ಜಿಲ್ಲಾಧಿಕಾರಿ ದಿವ್ಯ ಪ್ರಭು

35 ಗ್ರಾಮ ಪಂಚಾಯತಿಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆ; 

ಧಾರವಾಡ  23 : ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟು ಮಾಡುವ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳಗಳ ತೀರದ ಸುಮಾರು 35 ಗ್ರಾಮ ಪಂಚಾಯತಿಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಗಳು ವಿಪತ್ತು ನಿರ್ವಹಣೆಗೆ ಸ್ಥಳೀಯವಾಗಿ ಸಹಕಾರ ನೀಡಲಿವೆ. ಕಳೆದ ಜುಲೈ 12 ರಿಂದ ಜುಲೈ 22 ರವರೆಗೆ ಜಿಲ್ಲೆಯಾದ್ಯಂತ 80 ಮನೆಗಳು ಭಾಗಶಃ ಹಾನಿಯಾಗಿದ್ದು, ಅಧಿಕಾರಿಗಳ ತಂಡ ಪರೀಶೀಲಿಸಿ, ಪರಿಹಾರ ವಿತರಣೆಗೆ ಕ್ರಮವಹಿಸಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.  

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  

ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ ಜುಲೈ 12 ರಿಂದ 22 ರವರೆಗೆ 80 ಮನೆಗಳು ಭಾಗಶಃ ಹಾನಿ ಆಗಿವೆ. ಪ್ರಸಕ್ತ ಮುಂಗಾರಿನ ಮಳೆಗೆ ಇಲ್ಲಿವರೆಗೆ ಜಿಲ್ಲೆಯಲ್ಲಿ 07 ಮನೆಗಳಿಗೆ ತೀವ್ರ ಹಾನಿ ಮತ್ತು 120 ಮನೆಗಳಿಗೆ ಭಾಗಶಃ ಹಾನಿ ಆಗಿದ್ದು, ಒಟ್ಟು 127 ಮನೆಗಳಿಗೆ ಹಾನಿ ಆಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಮಳೆಯಿಂದ ಹಾನಿಯಾದ ಮನೆಗಳಿಗೆ ರಾಷ್ಟ್ರೀಯ ವಿಪತ್ತು ನಿಧಿ ಮಾರ್ಗಸೂಚಿಗಳನ್ವಯ ಪರಿಹಾರ ವಿತರಣೆಗೆ ಕ್ರಮವಹಿಸಲಾಗಿದ್ದು, ತಹಶೀಲ್ದಾರ ನಿರ್ದೇಶನದಲ್ಲಿ ಕಂದಾಯ ಹಾಗೂ ಇಂಜೀನೀಯರಿಂಗ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.  

ಅಂಗನವಾಡಿ, ಶಾಲಾ ಕಟ್ಟಡ ಗಮನಿಸಿ ಆಯಾ ತಾಲೂಕಿನ ತಹಶೀಲ್ದಾರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಸೋರಿಕೆ, ಶೀಥಿಲತೆ ಗಮನಿಸಬೇಕು. ತೊಂದರೆ ಕಂಡುಬಂದಲ್ಲಿ ಅಂತಹ ಕ್ಲಾಸ್‌ಗಳನ್ನು ಸ್ಥಳಾಂತರಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು, ಕೊಠಡಿಗಳ ದುರಸ್ತಿ ಅಗತ್ಯವಿದ್ದಲ್ಲಿ, ಅಂತವುಗಳ ಪಟ್ಟಿಯಲ್ಲಿ ತಹಶೀಲ್ದಾರ ಮತ್ತು ಬಿಇಓಗಳ ಜಂಟಿಯಾಗಿ ಸಹಿ ಮಾಡಿ, ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ತಕ್ಷಣ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಪ್ರಸಕ್ತ ಮುಂಗಾರಿನಲ್ಲಿ 127 ಮನೆಹಾನಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನ ಮಳೆಗೆ 127 ಮನೆಗಳು ಹಾನಿಯಾಗಿವೆ. ಕಳೆದ 10 ದಿನಗಳಿಂದ ಹೆಚ್ಚು ಮಳೆ ಆಗುತ್ತಿದ್ದು, ಈ ಅವಧಿಯಲ್ಲಿ ಧಾರವಾಡ 26, ಅಳ್ನಾವರ 1, ಹುಬ್ಬಳ್ಳಿ 8, ಹುಬ್ಬಳ್ಳಿ ನಗರ 9, ಕಲಘಟಗಿ 28, ಕುಂದಗೋಳ 3, ನವಲಗುಂದ 5 ಮನೆಗಳು  ಸೇರಿ ಸುಮಾರು 80 ಮನೆಗಳು ಭಾಗಶಃ ಹಾನಿಯಾಗಿದೆ.  ತಹಶೀಲ್ದಾರರು ಹಾನಿಯಾದ ಮನೆಗಳ ವರದಿ ಪಡೆದು ತಕ್ಷಣ ಪರಿಹಾರ ಹಣ ಫಲಾನುಭವಿಗಳಿಗೆ ಜಮೆ ಮಾಡಬೇಕು. ಈ ಕುರಿತು ವರದಿಯನ್ನು ಕಚೇರಿಗೆ ಈ ವಾರದಲ್ಲಿ ಸಲ್ಲಿಸಬೇಕೆಂದು ಅವರು ಸೂಚಿಸಿದರು.  

ಒಂದು ಜಾನುವಾರ ಹಾನಿ ನಿನ್ನೆ (ಜು.22) ದಿನ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಮಳೆ, ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಒಂದು ಜಾನುವಾರ ಜೀವ ಹಾನಿ ಆಗಿದೆ. ಅದಕ್ಕೆ ಹೆಸ್ಕಾಂದಿಂದ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ಜನ, ಜನುವಾರುಗಳ ಜೀವ ರಕ್ಷಣೆ ಕುರಿತು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಗ್ರಾಮ ಪಂಚಾಯತ ಅಧಿಕಾರಿಗಳು ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.  

ನವಲಗುಂದದಲ್ಲಿ ತಾತ್ಕಾಲಿಕ ಅಗ್ನಿಶಾಮಕ ಠಾಣೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ.  

ಮಳೆಯಿಂದಾಗಿ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳಲ್ಲಿ ಪ್ರವಾಹ ಉಂಟಾಗಿ, ಸಾರ್ವಜನಿಕರಿಗೆ ತೊಂದರೆ ಆದರೆ ತಕ್ಷಣ ಸ್ಪಂಧಿಸಲು ರಕ್ಷಣಾ ತಂಡ ಸಿದ್ಧವಾಗಿರಬೇಕು. ಈ ಹಿನ್ನಲೆಯಲ್ಲಿ ನವಲಗುಂದ ಪಟ್ಟಣದಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ತಾತ್ಕಾಲಿಕವಾದ ಅಗ್ನಿಶಾಮಕ ಠಾಣೆಯನ್ನು ತೆರೆಯುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.  

ಡೆಂಗ್ಯೂ ಡೇ ಸರಕಾರದ ನಿರ್ದೇಶನದಂತೆ ಪ್ರತಿ ಶುಕ್ರವಾರ ಜಿಲ್ಲೆಯಾದ್ಯಂತ ವಾರ್ತಾ ನಿರ್ಮೂಲನೆ ದಿನ ಆಚರಿಸಲಾಗುತ್ತದೆ. ಅದರಂತೆ ಪ್ರತಿ ಶನಿವಾರ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಡೆಂಗ್ಯೂ ಜಾಗೃತಿ ಹಾಗೂ ಶಾಲಾ ಸ್ವಚ್ಛತಾ ದಿನ ಆಚರಿಸಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ, ಇಓ ಮತ್ತು ಟಿಎಚ್‌ಓ ಭಾಗವಹಿಸಬೇಕು ಗ್ರಾಮಮಟ್ಟದಲ್ಲಿ ಅಲ್ಲಿನ ಕಂದಾಯ, ಪಂಚಾಯತರಾಜ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಮತ್ತು ಕಾರ್ಯಕ್ರಮಗಳ ಜಿಪಿಎಸ್ ಫೋಟೊಗಳನ್ನು ಪೂರೈಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.  

ಬೇವಿನ ಎಣ್ಣೆ ವಿತರಿಸಿ ಡೆಂಗ್ಯೂ ಖಚಿತವಾಗಿರುವ ಮತ್ತು ಡೆಂಗ್ಯೂ ಹಾಟ್‌ಸ್ಪಾಟಗಳೆಂದು ಗುರುತಿಸಿರುವ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಬೇವಿನ ಎಣ್ಣೆ ವಿತರಿಸಿ, ಅದರ ಬಳಕೆ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ. ಆರೋಗ್ಯ ಕಾರ್ಯಕರ್ತರು, ಆಶಾಗಳು ಹೆಚ್ಚು ಕ್ರಿಯಾಶೀಲವಾಗಬೇಕೆಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ವೇದಿಕೆಯಲ್ಲಿದ್ದರು.  

ಸಭೆಯಲ್ಲಿ ಜಿಲ್ಲಾ ಪಂಚಾಯತ ಪ್ರಭಾರ ಉಪಕಾರ್ಯದರ್ಶಿ ದೀಪಕ ಮಡಿವಾಳರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಎಸ್‌.ಕೆಳದಿಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ.ಭದ್ರಣ್ಣವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ. ಆರ್‌.ಸಿ.ಎಚ್‌. ಅಧಿಕಾರಿ ಡಾ.ಸುಜಾತಾ ಹಸವೀಮಠ, ಲೋಕೋಪಯೋಗಿ ಇಲಾಖೆ ಇಇ. ಪಂಚಾಯತ ರಾಜ್ಯ ಇಂಜೀನೀಯರಿಂಗ್ ವಿಭಾಗ, ಅಗ್ನಿಶಾಮಕ ಇಲಾಖೆ, ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರ ಇಲಾಖೆ ಅಧಿಕಾರಿಗಳು ಭಾಗವಹಿಸಿ ವಿಪತ್ತು ನಿರ್ವಹಣೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.  


ಸುದ್ದಿ ಓದಿ