ಕರ್ನಾಟಕ ಪಬ್ಲಿಕ್ ಪೌಢಶಾಲೆಯ ಬೀಳ್ಕೊಡುವ ಸಮಾರಂಭ
ಲೋಕದರ್ಶನ ವರದಿ
ಇಂಡಿ : ಶಿಸ್ತು ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಜೀವನದ ಸರ್ವತೋಮುಖ ಬೆಳವಣಿಗೆಗೆ ಪ್ರೇರೇಪಿಸಲು ಸಹಾಯಕವಾಗುತ್ತದೆ. ಶಿಸ್ತಿನಿಂದ ಬೆಳೆದ ವಿದ್ಯಾರ್ಥಿಗಳು ತನ್ನ ಶಾಲೆ ಕೀರ್ತಿಗೆ ಕಾರಣರಾಗುತ್ತಾರೆ, ಮತ್ತು ಸಮಾಜವು ಸದಾ ಗೌರವಿಸುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಶುಕ್ರವಾರ ತಾಲೂಕಿನ ಹಳಗುಣಕಿ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ಜರುಗಿದ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ, ಮಕ್ಕಳಿಗೆ ಓದುವ ಸ್ಪರ್ಧೆಗಿಂತ ಸಮಾಜವನ್ನು ಎದುರಿಸಲು ಬೇಕಾದ ಜಾಣ್ಮೆ, ಸಾಮರ್ಥ್ಯವನ್ನು ನೀಡಬೇಕು. ಜೀವನದ ಕಲೆಯನ್ನು ಅನುಭವಿಸಲು ಸಾಧ್ಯವಾಗುವಂತ ಮೌಲ್ಯಗಳನ್ನು ನೀಡುವುದು ಅವಶ್ಯಕ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ನಾಗೇಶ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತಿನ ಕೊರತೆಯಿಂದ ಹಲವಾರು ಗೊಂದಲಗಳು, ಅವ್ಯವಸ್ಥೆಗಳು ಸೃಷ್ಟಿಯಾಗಿ ಅವರ ಭವಿಷ್ಯವನ್ನು ಹಾಳು ಮಾಡುತ್ತವೆ. ಶಿಸ್ತು ಇಲ್ಲದೆ ಅಧ್ಯಯನ ಮತ್ತು ಯಶಸ್ಸು ಪಡೆಯುವುದು ತುಂಬಾ ಕಷ್ಟ. ಶಿಸ್ತು ಜೀವನಕ್ಕೆ ಕ್ರಮಬದ್ಧತೆಯನ್ನು ನೀಡುತ್ತದೆ ಎಂದು ಹೇಳಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸಿ, ಅಧ್ಯಯನ ಮಾಡುವಾಗ ನಿಮ್ಮ ಗಮನವನ್ನು ಬೇರೆಡೆ ಕೇಂದ್ರೀಕರಿಸಬೇಡಿ, ಏಕಾಗ್ರತೆಯಿಂದ ಅಧ್ಯಯನ ಮಾಡಿ, ನಿಮ್ಮ ಹೆತ್ತವರನ್ನು ಗೌರವಿಸಿ ಮತ್ತು ಅವರ ಮಾತನ್ನು ಆಲಿಸಬೇಕು ಎಂದು ಹೇಳಿದರು.
ಎಸ್ಡಿಎಂಸಿ ಉಪಾಧ್ಯಕ್ಷ ರಾಜಶೇಖರ ಬಿರಾದಾರ, ಸದಸ್ಯ ಸಿದ್ದರಾಮ ಮಾಡಗ್ಯಾಳ, ಚಂದ್ರಕಾಂತ ಸಿನಖೇಡ, ಸಿದ್ದರಾಮ ಹೆಗಡ್ಯಾಳ, ಸಿದ್ದು ಕುಂಬಾರ, ಪ್ರಾಸ್ತಾವಿಕವಾಗಿ ಎಸ್.ಬಿ. ಮಕಾನದಾರ ಮಾತನಾಡಿದರು, ಕಾಲೇಜಿನ ಪ್ರಾಚಾರ್ಯ ಬಿ.ಬಿ. ಚವ್ಹಾಣ, ಸಿಆರ್ಪಿ ದಾದಾ ಶ್ಯಾಮಣ್ಣವರ ಎಸ್.ಎಸ್. ಕರಜಗಿ ನಿರೂಪಿಸಿದರು. ಸತ್ಯಪ್ಪ ಕಪನಿಂಬರಗಿ ಸ್ವಾಗತಿಸಿದರು. ಶಾಲಾ ವಾರ್ಷಿಕ ವರದಿಯನ್ನು ಸುನಿತಾ ದೊಡಮನಿ ವಾಚಿಸಿದರು. ಸಂಗಮೇಶ ಬಂಡೆ ವಂದಿಸಿದರು.