ಪ್ರತಿಯೊಬ್ಬ ಪತ್ರಕರ್ತ ತಮ್ಮ ವೃತ್ತಿ ಧರ್ಮ ಪಾಲಿಸಬೇಕು: ತುರಮರಿ
ಬೈಲಹೊಂಗಲ 26: ಪತ್ರಕರ್ತರು ಸಮಗ್ರ ಜ್ಞಾನ ಹೊಂದುವ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಬೇಕು. ತಾತ್ಸಾರ, ಉದಾಸೀನ ಭಾವನೆ ಬೆಳೆಸಿಕೊಳ್ಳಬಾರದು. ಉತ್ತಮ ಸಮಾಜ ನಿರ್ಮಿಸಲು ವೃತ್ತಿ ಧರ್ಮ ಎತ್ತಿ ಹಿಡಿಯಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಅಧ್ಯಕ್ಷ ಮಹಾಂತೇಶ ತುರಮರಿ ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಬೆಳಗಾವಿ ಜಿಲ್ಲಾ ಘಟಕದಿಂದ ಬಂದ 2023ನೇ ಸಾಲಿನ ಪತ್ರಕರ್ತರ ಗುರುತಿನ ಚೀಟಿಗಳನ್ನು ಸಂಘದ ಸದಸ್ಯರಿಗೆ ಸೋಮವಾರ ವಿತರಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ಪತ್ರಕರ್ತ ತಮ್ಮ ವೃತ್ತಿ ಧರ್ಮ ಪಾಲಿಸಬೇಕು. ಯುವ ಜನಾಂಗ ತಮ್ಮ ನಡುವಳಿಕೆ, ಸ್ಪಂದನೆ, ಭಾಷೆಯ ಮೇಲೆ ಹೆಚ್ಚಿನ ಗಮನವಿಡಬೇಕು. ಜವಾಬ್ದಾರಿ ಅರಿತು ಸಮಾಜದ ತಪ್ಪುಗಳನ್ನು ತಿದ್ದುವ ಕಾರ್ಯ ಮಾಡಬೇಕು ಎಂದರು.
ಜಿಲ್ಲಾ ಘಟಕ ಕಾರ್ಯದರ್ಶಿ ಹಿರಿಯ ಪತ್ರಕರ್ತ ಈಶ್ವರ ಹೋಟಿ ಮಾತನಾಡಿ ಈ ಹಿಂದೆ ಪತ್ರಿಕಾ ಧರ್ಮ ಎನ್ನುವುದು ಇತ್ತು. ಆದರೆ ಅದು ಇದೀಗ ಉದ್ಯಮವಾಗಿ ಬದಲಾಗಿದೆ. ಇದರಿಂದ ಇತ್ತಿಚೀನ ದಿನಗಳಲ್ಲಿ ವೃತ್ತಿ ಧರ್ಮ ಕಾಣುತ್ತಿಲ್ಲ. ಪತ್ರಿಕಾ ರಂಗದ ಆರಂಭದ ದಿನಗಳಲ್ಲಿ ಇದ್ದ ಪ್ರಜ್ಷೆ, ಬದ್ಧತೆ, ಪ್ರಾಮಾಣಿಕತೆ ಮಾಯವಾಗುತ್ತಿರುವುದು ಕಳವಳಕಾರಿ ಆಗಿದೆ. ಪತ್ರಿಕೋಧ್ಯಮ ತನ್ನ ತನವನ್ನು ಉಳಿಸಿಕೊಳ್ಳಲು ನ್ಯಾಯಯುತ ವರದಿಗಳನ್ನು ಪ್ರಕಟಿಸಬೇಕು. ಓದುಗುರು ವಸ್ತುನಿಷ್ಠ ವರದಿಗಳನ್ನು ಪಡೆಯುವ ಹಕ್ಕು ಹೊಂದಿದ್ದಾರೆ. ಪ್ರತಿಯೊಬ್ಬ ಪತ್ರಕರ್ತ ತಮ್ಮ ವೃತ್ತಿ ಧರ್ಮ ಪಾಲಿಸಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕ ಕೊಡುಗೆ ನೀಡಬೇಕು ಎಂದರು.ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರವಿಕುಮಾರ ಹುಲಕುಂದ ಮಾತನಾಡಿ ಜಿಲ್ಲಾ ಘಟಕ ಅಧ್ಯಕ್ಷ ದೀಲೀಪ ಕುರಂದವಾಡೆ ನೇತೃತ್ವದ ಜಿಲ್ಲಾ ಸಂಘ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ಸದಸ್ಯರ ಕಲ್ಯಾಣಕ್ಕಾಗಿ ಹಲವರು ಯೋಜನೆಗಳನ್ನು ಹಾಕಿಕೊಂಡಿದ್ದು, ಸದ್ಯದಲ್ಲಿಯೇ ಕಾರ್ಯರೂಪಕ್ಕೆ ತರಲ್ಲಿದ್ದಾರೆ. ಜು.2ರಂದು ಬೆಳಗಾವಿಯಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಎಲ್ಲರನ್ನು ಆಹ್ವಾನಿಸಿದ್ದು, ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಪತ್ರಕರ್ತರ ರಾಷ್ಟ್ರೀಯ ಸಮ್ಮೇಳನ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.
ಸಂಘದ ಸದಸ್ಯರಾದ ಬಸವರಾಜ ಕಲಾದಗಿ, ವಿರುಪಾಕ್ಷ ವಾಲಿ, ಕುಮಾರ ರೇಶ್ಮಿ, ಉದಯ ಕೋಳೆಕರ, ಶರೀಫ ನದಾಫ, ರಾಜು ಬಡಿಗೇರ, ಮಂಜುನಾಥ ಜ್ಯೋತಿ, ಯುನಸ್ ಬಡೆಘರ ಇದ್ದರು.